ಕರ್ನಾಟಕ

karnataka

ETV Bharat / state

ಕೈಯಲ್ಲಿ ಪೆನ್ನು ಡಸ್ಟರ್ ಹಿಡಿದ ಸಬ್ ಇನ್ಸ್‌ಪೆಕ್ಟರ್: ಕಟ್ಟಡ ಕಾರ್ಮಿಕ ಮಕ್ಕಳಿಗೆ ಖಾಕಿ ಪಾಠ..! - ಕೈಯಲ್ಲಿ ಪೆನ್ನು ಡಸ್ಟರ್ ಹಿಡಿದ ಸಬ್ ಇನ್ಸ್‌ಪೆಕ್ಟರ್

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ಶಾಂತಪ್ಪ ಜಡೆಮ್ಮನವರ್, ಸ್ಲಂ ಪ್ರದೇಶದ ಬಡ ಕುಟುಂಬಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.

PSI Lesson for Building Labor Children
ಕೈಯಲ್ಲಿ ಪೆನ್ನು ಡಸ್ಟರ್ ಹಿಡಿದ ಸಬ್ ಇನ್ಸ್‌ಪೆಕ್ಟರ್

By

Published : Sep 5, 2020, 6:05 AM IST

Updated : Sep 5, 2020, 10:03 PM IST

ಬೆಂಗಳೂರು: ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಹಾಗೂ ತಪ್ಪು ಮಾಡಿದವರಿಗೆ ಶಿಕ್ಷಿಸಿ, ಒಳ್ಳೆಯ ದಾರಿಗೆ ತರುವ ಪೊಲೀಸರನ್ನು ಮತ್ತೊಬ್ಬ ಗುರು ಎಂದರೆ ತಪ್ಪಾಗಲ್ಲ. ಕೇವಲ ಸಮಾಜದ ಒಳಿತಿಗಾಗಿ ದುಡಿಯುವ ಪೊಲೀಸರು, ತಮ್ಮ ಬಿಡುವಿನ‌ ವೇಳೆಯಲ್ಲೂ ಸಮಾಜಮುಖಿ ಕೆಲಸದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಾಣ ಮಾಡುತ್ತಾ, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ಪೊಲೀಸ್ ಅಂದರೆ ಅಲ್ಲೊಂದು ಸ್ಪೂರ್ತಿಯ ಕಥೆ ಇರುತ್ತೆ. ಎಷ್ಟೇ ಕೆಲಸದ ಒತ್ತಡಗಳು ಇದ್ದರೂ ಸಮಸ್ಯೆ ಅಂದಾಗ ನೆನಪಾಗೋದು ಖಾಕಿ. ಸಂಭ್ರಮದ ಕ್ಷಣಗಳೇ ಆಗಲಿ, ಗಲಾಟೆ ಗಲಭೆಗಳೇ ಆಗಲಿ ಎಲ್ಲಾ ಕಡೆ ಪೊಲೀಸ್ ಬೇಕೇ ಬೇಕು. ಇದೀಗ ಜ್ಞಾನಾರ್ಜನೆಯಲ್ಲೂ ತಮ್ಮ ಅಳಿಲು ಸೇವೆ ಮಾಡುತ್ತಿದ್ದಾರೆ ಇಲ್ಲೊಬ್ಬರು ಖಾಕಿ ಹಾಕಿದ ಮೇಷ್ಟು.

ಕೈಯಲ್ಲಿ ಪೆನ್ನು ಡಸ್ಟರ್ ಹಿಡಿದ ಸಬ್ ಇನ್ಸ್‌ಪೆಕ್ಟರ್

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ಶಾಂತಪ್ಪ ಜಡೆಮ್ಮನವರ್, ಸ್ಲಂ ಪ್ರದೇಶದ ಬಡ ಕುಟುಂಬಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ನಾಗರಬಾವಿ ವ್ಯಾಪ್ತಿಯ ವಿನಾಯಕ ನಗರ 9ನೇ ಬ್ಲಾಕ್‌ನಲ್ಲಿ ಕಟ್ಟಡ ಕಾರ್ಮಿಕರ ಕುಟುಂಬಗಳ 30 ಕ್ಕೂ‌ಹೆಚ್ಚು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ 3 ರಿಂದ 7 ನೇ ತರಗತಿಗಳ ಮಕ್ಕಳಿಗೆ ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಹೇಳಿಕೊಡುತ್ತಿದ್ದಾರೆ.

ಶಾಂತಪ್ಪ ಅವರು ಸಹ ಕಾರ್ಮಿಕನ ಮಗನಾಗಿದ್ದು, ಈ ಕಷ್ಟಗಳನ್ನೆಲ್ಲ ನೋಡಿದ್ದಾರೆ. ಅದಕ್ಕಾಗಿ ಈ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಪ್ರತಿದಿನ ಠಾಣೆಗೆ ಕರ್ತವ್ಯಕ್ಕೆ‌ ಹೋಗುವ ಮುನ್ನ ಇಲ್ಲಿ ವಿದ್ಯಾಧಾರೆ ಮುಗಿಸಿ ಹೋಗುತ್ತಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಶಾಂತಪ್ಪನವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಮಾನವೀಯ ಹೃದಯದಿಂದ ಉತ್ತಮ ಸೇವೆ ಮಾಡುತ್ತಿರುವ ಪಿಎಸ್​ಐ ಶಾಂತಪ್ಪ ಜಡೆಮ್ಮನವರ್ ಅವರಿಗೆ ಸಲ್ಯೂಟ್ ಸಲ್ಲಿಸಿದ್ದಾರೆ.

ಕೊರೊನಾ ಕಾಲದಲ್ಲಿ ಇಂತಹ ಅದೆಷ್ಟೋ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹವರಿಗೆ ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಅಂತಹ ನಿಸ್ವಾರ್ಥ ಸೇವೆಯಲ್ಲಿ ಶಾಂತಪ್ಪನವರು ಮಾಡುತ್ತಿದ್ದಾರೆ.‌

ಇತ್ತ ಮಕ್ಕಳು ಕೂಡ ಖಾಕಿ ಮೇಷ್ಟ್ರು ಪಾಠಕ್ಕೆ ಮಾರು ಹೋಗಿದ್ದು, ಮೇಷ್ಟು ಬಂದರೂ ಅಂದರೆ ಸಾಕು ಗುಡಿಸಲಿನಿಂದ ಕೈಯಲ್ಲಿ ಪುಸ್ತಕ ಹಿಡಿದು ಓಡಿ ಬಂದು ಕೂರುತ್ತಾರೆ. ಪ್ರತಿದಿನ ಶಾಂತಪ್ಪನವರು ಕೊಡುವ ಮನೆ ಪಾಠವನ್ನ ಚಾಚು ತಪ್ಪದೇ ಮುಗಿಸುತ್ತಾರೆ.

ಶಾಂತಪ್ಪನವರು ಮಕ್ಕಳಿಗೆ ಪುಸ್ತಕದ ಪಾಠವಷ್ಟೇ ಮಾಡೋದಿಲ್ಲ. ಬದಲಿಗೆ ಸ್ವಚ್ಚತೆಯ ಪಾಠ, ಬದುಕಿನ ಪಾಠವನ್ನ ಹೇಳಿಕೊಡ್ತಾರೆ. ಮಕ್ಕಳನ್ನ ತಮ್ಮ ಮಾತುಗಳಿಂದ ಉರಿದುಂಬಿಸಿ ಪ್ರೋತ್ಸಾಹಿಸುತ್ತಾರೆ. ಭವಿಷ್ಯದಲ್ಲಿ ನೀವೂ ಕೂಡ ದೊಡ್ಡ ದೊಡ್ಡ ವ್ಯಕ್ತಿಗಳಾಗಬೇಕು. ಕಷ್ಟದಲ್ಲಿರುವ ಮಕ್ಕಳಿಗೆ ಸಹಾಯವನ್ನ ಮಾಡಬೇಕು ಅಂತ ಸ್ಪೂರ್ತಿಯ ಮಾತುಗಳನ್ನ ಆಡ್ತಾರೆ.

ಅದೇನೆ ಇರಲಿ, ನಮ್ಮಲ್ಲಿರುವ ವಿದ್ಯೆ ಮತ್ತಷ್ಟು ಹೆಚ್ಚಾಗಬೇಕು, ಅದು ಹಾಗೇ ಉಳಿಬೇಕು ಅಂದರೆ ಆ ವಿದ್ಯೆಯನ್ನ‌ ಮತ್ತೊಬ್ಬರಿಗೆ ಹಂಚಬೇಕು. ಆ ಮೂಲಕ ಮತ್ತೊಬ್ಬರ ಬಾಳು ಬೆಳಕಾಗಬೇಕು. ಸಮಾಜದ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ ಅಂತ ಮಹನೀಯರು ಹೇಳಿದ್ದಾರೆ.‌ ಆ ಕೆಲಸವನ್ನ ಈ ಪಿಎಸ್​ಐ ಮಾಡುತ್ತಿದ್ದು, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇವರು ಸ್ಪೂರ್ತಿಯಾಗಿದ್ದಾರೆ. ಅವರ ಈ ಸೇವೆಗೆ ನಮ್ಮದೊಂದು ಸಲಾಂ.

Last Updated : Sep 5, 2020, 10:03 PM IST

ABOUT THE AUTHOR

...view details