ಬೆಂಗಳೂರು:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದಕ್ಕೆ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ ಹೇರಿದೆ. ಸಹಾಯಕ ಹುದ್ದೆಯ ಬಡ್ತಿಗೆ ಕೆಪಿಟಿಸಿಎಲ್ ಪ್ರಕಟಿಸಿದ್ದ ಸಂಭಾವ್ಯ ಜೇಷ್ಠತಾ ಪಟ್ಟಿಯನ್ನು ಪ್ರಶ್ನಿಸಿ ದಾವಣಗೆರೆಯ ಜೀನಹಳ್ಳಿ ನಿವಾಸಿ ಹಾಗೂ ಕೆಪಿಟಿಸಿಎಲ್ ಪ್ರಭಾರಿ ಸಹಾಯಕ ಎಂಜಿನಿಯರ್ ಬಿ.ಸುಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ, ಸಂಭಾವ್ಯ ಜೇಷ್ಠತಾ ಪಟ್ಟಿಗೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆ ಪರಿಗಣಿಸಬೇಕು. ನಂತರ ಅರ್ಜಿದಾರರು ಹೈದರಾಬಾದ್ ಕರ್ನಾಟಕ ಪ್ರದೇಶದ ಮೀಸಲು ಕೋಟಾದಡಿ ಸಹಾಯಕ ಎಂಜಿನಿಯರ್ ಹುದ್ದೆ ಬಡ್ತಿ ಪಡೆಯಲು ಅರ್ಹರಿದ್ದಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಿ 4 ವಾರಗಳಲ್ಲಿ ಸೂಕ್ತ ಅದೇಶ ಹೊರಡಿಸಬೇಕು. ಅಲ್ಲಿಯವರಿಗೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದು ಎಂದು ಕೆಪಿಟಿಸಿಎಲ್‌ಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.