ಬೆಂಗಳೂರು :ನಕಲಿ ಟಿಆರ್ಪಿ ಹಗರಣದಲ್ಲಿ ಆರೋಪಿಯಾಗಿರುವ ಖಾಸಗಿ ಸುದ್ದಿ ವಾಹಿನಿಯ ಸಿಒಒ ಪ್ರಿಯಾ ಮುಖರ್ಜಿ ಅವರಿಗೆ ಹೈಕೋರ್ಟ್ 20 ದಿನಗಳ ಕಾಲ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿರುವ ಮುಂಬೈ ಪೊಲೀಸರು, ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಈಗ ಬಂಧನ ಭೀತಿಗೆ ಒಳಗಾಗಿದ್ದ ಪ್ರಿಯಾ ಮುಖರ್ಜಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೆಚ್ ಪಿ ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ, ಪ್ರಿಯಾ ಮುಖರ್ಜಿ ಅವರಿಗೆ 20 ದಿನಗಳ ಕಾಲ ಟ್ರಾನ್ಸಿಟ್ ಜಾಮೀನು ನೀಡಿ ಆದೇಶಿಸಿದೆ. ಈ ಅವಧಿಯಲ್ಲಿ ಪೊಲೀಸರು ಒಂದು ವೇಳೆ ಬಂಧಿಸಿದ್ರೆ, 20 ಲಕ್ಷ ಮೊತ್ತದ ಬಾಂಡ್ ಹಾಗೂ ಇಬ್ಬರು ವ್ಯಕ್ತಿಗಳ ಭದ್ರತೆ ಪಡೆದು ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿದೆ. 20 ದಿನಗಳ ಬಳಿಕ ಸೂಕ್ತ ಕಾನೂನು ಪರಿಹಾರ ಕಂಡುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ :ನಕಲಿ ಟಿಆರ್ಪಿ ಪ್ರಕರಣದಲ್ಲಿ ಪ್ರಿಯಾ ಮುಖರ್ಜಿ ಪಾತ್ರವಿರುವ ಆರೋಪದಡಿ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ನಡುವೆ ಪ್ರಿಯಾ ತಮ್ಮ ಅನಾರೋಗ್ಯ ಪೀಡಿತ ತಂದೆ ನೋಡಲು ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಗೆ ತೆರಳುವುದಾಗಿ ತಿಳಿಸಿದ್ದರು.
ಇದನ್ನೂ ಓದಿ:ಶಾಸಕರು ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ : ಸಚಿವ ಭೈರತಿ ಬಸವರಾಜ್
ಹಾಗಿದ್ದೂ ಬೆನ್ನತ್ತಿದ್ದ ಮುಂಬೈ ಪೊಲೀಸರು ವಿಚಾರಣೆಗೆ ಬೆಂಗಳೂರಿನ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಿಯಾ ಮುಖರ್ಜಿ, ತಾನೀಗಾಗಲೇ ನವೆಂಬರ್ 17 ಮತ್ತು 18ರಂದು ಪೊಲೀಸರ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದೇನೆ. ಹಾಗಿದ್ದರೂ ತನ್ನಿಂದ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರ ವಿರುದ್ಧ ಹೇಳಿಕೆ ಪಡೆಯಲು ಪೊಲೀಸರು ಇಂತಹ ಕ್ರಮ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿವಾದ ಮಂಡಿಸಿದ್ದ ಮುಂಬೈ ಪೊಲೀಸರು ಪ್ರಿಯಾ ಮುಖರ್ಜಿ ಇದೇ ಮಾದರಿಯ ಅರ್ಜಿಯನ್ನು ಮುಂಬೈ ಕೋರ್ಟ್‌ನಲ್ಲಿಯೂ ಸಲ್ಲಿಸಿದ್ದಾರೆ. ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಊರ್ಜಿತವಲ್ಲದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬಾರದು ಎಂದು ಕೋರಿದ್ದರು.