ಕರ್ನಾಟಕ

karnataka

ETV Bharat / state

ರಾಮಾಯಣದ ಸಾಲು ಉಲ್ಲೇಖಿಸಿ ಅನಾರೋಗ್ಯಕ್ಕೀಡಾದ ತಾಯಿ ನೋಡಲು ಕೈದಿಗೆ ಪೆರೋಲ್ - ತಾಯಿ ಭೇಟಿಗೆ ಕೈದಿಗೆ ತುರ್ತು ಪರೋಲ್

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧ ತಾಯಿಯನ್ನು ಭೇಟಿ ಮಾಡಲು ಕೈದಿಗೆ ಹೈಕೋರ್ಟ್​ ತುರ್ತು ಪರೋಲ್ ಮಂಜೂರು ಮಾಡಿದೆ.

prisoner-granted-emergency-parole-to-meet-mother
ಅನಾರೋಗ್ಯಕ್ಕೀಡಾದ ತಾಯಿ ನೋಡಲು ಕೈದಿಗೆ ಪೆರೋಲ್

By

Published : Jun 1, 2023, 7:06 PM IST

ಬೆಂಗಳೂರು :ವಾಲ್ಮೀಕಿ ರಾಮಾಯಣದಲ್ಲಿರುವಂತೆ "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬ ಅಂಶವನ್ನು ಉಲ್ಲೇಖಿಸಿರುವ ಹೈಕೋರ್ಟ್, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧ ತಾಯಿಯೊಂದಿಗೆ ಇರಲು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಯೊಬ್ಬನಿಗೆ 3 ವಾರಗಳ ಅವಧಿಗೆ ತುರ್ತು ಪರೋಲ್ ಮಂಜೂರು ಮಾಡಿ ಆದೇಶಿಸಿದೆ.

ಬಾಗಲಕೋಟೆ ಜಿಲ್ಲೆಯ ಬೆನಕನವಾರಿ ಗ್ರಾಮ ಶಿವಪ್ಪ ಬೆಲ್ಲದ ​(ಪ್ರಸ್ತುತ ಜೈಲಿನಲ್ಲಿದ್ದಾರೆ) ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​ ಅವರಿದ್ದ ನ್ಯಾಯಪೀಠ, ಅನಾರೋಗ್ಯದಿಂದ ಬಳಲುವ ತಾಯಿಯನ್ನು ನೋಡಲು ಅವಕಾಶ ಕಲ್ಪಿಸಿದೆ.

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾಗಿರುವಾಗ ಸಾವಿಗೆ ಸಮೀಪಿಸುತ್ತಿರುವ ತಾಯಿಯನ್ನು ನೋಡಲು ಮಗನಿಗೆ ಅವಕಾಶ ನಿರಾಕರಿಸಬಾರದು. ಮಾನವನ ಜೀವನದಲ್ಲಿ ತಾಯಿ ಮತ್ತು ಮಕ್ಕಳ ನಡುವೆ ಭರಿಸಲಾಗದ ಬಾಂಧವ್ಯದ ಪ್ರಜ್ಞೆಯಿದ್ದು, ಷರತ್ತುಬದ್ಧವಾಗಿ ನೋಡಿಕೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೇ, ತಾಯಿಯು ಸಾವಿನ ಹತ್ತಿರದಲ್ಲಿದ್ದಾಗ ಮಕ್ಕಳು ನೋಡಿಕೊಳ್ಳಬೇಕು. ಜೊತೆಗೆ ಮಕ್ಕಳು ತಾಯಿಯನ್ನು ನೋಡಬೇಕು ಎಂಬುದು ನ್ಯಾಯಸಮ್ಮತವಾದ ಬೇಡಿಕೆಯಾಗಿದೆ. ಹೀಗಿರುವಾಗ ತನ್ನ ತಾಯಿಯನ್ನು ನೋಡಲು ಮಗನಿಗೆ ಸಮಂಜಸವಾದ ಅವಕಾಶ ಕಸಿದುಕೊಳ್ಳಲಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಆಂಗ್ಲ​ ಕವಿ "ಜಾರ್ಜ್ ಎ ಎಲ್ಲಿಸ್"​ ಎಂಬುವರು ತಮ್ಮ "ಇನ್​ಸೈಡ್​ ಫೊಲ್ಸೋಂ ಪ್ರಿಸನ್​" ಎಂಬ ಪುಸ್ತಕದಲ್ಲಿ "ಕೈದಿಗಳು ಸಾಮಾನ್ಯರಂತೆ ಭಾವನೆ ಹೊಂದಿರದ ವ್ಯಕ್ತಿಗಳಲ್ಲ, ಎಲ್ಲರಂತೆ ಭಯ ಮತ್ತು ಆಕಾಂಕ್ಷೆಯನ್ನು ಹೊಂದಿರುತ್ತಾರೆ. ಬೀದಿಯಲ್ಲಿರುವ ವ್ಯಕ್ತಿಗಿಂತಲೂ ಹೆಚ್ಚಾಗಿ ತಮ್ಮ ನೆರೆಹೊರೆಯವರೊಂದಿಗೆ ಹೋರಾಡಲು ಬಯಸುವುದಿಲ್ಲ. ಶಾಂತಿಯಿಂದ ಬದುಕಲು ಮತ್ತು ಸಾಧ್ಯವಾದಷ್ಟು ಶೀಘ್ರದಲ್ಲಿ ತಮ್ಮ ಪ್ರೀತಿ ಪಾತ್ರರರಲ್ಲಿಗೆ ಹಿಂದಿರುಗಿಸಲು ಬಯಸುತ್ತಾರೆ" ಎಂಬ ಸಾಲುಗಳನ್ನು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ ಏನು ? :ಕೊಲೆ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಬಯಲು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅರ್ಜಿದಾರರು ಶಿವಪ್ಪ ಬೆಲ್ಲದ ಎಂಬುವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಕುಷ್ಟಗಿಯ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ 75 ವರ್ಷದ ತಾಯಿಯನ್ನು ನೋಡಲು 30 ದಿನಗಳ ಕಾಲ ಪೆರೋಲ್​ ನೀಡಬೇಕು ಎಂದು ಕೋರಿ ಜೈಲು ಅಧಿಕಾರಿಗಳಿಗೆ ಶಿವಪ್ಪ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿ ದೃಢೀಕರಣ ಪತ್ರವನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ಬೆಲ್ಲದ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರ ಕಳೆದ 7 ವರ್ಷಗಳಿಂದ ಜೈಲಿನಲ್ಲಿದ್ದು, ಅವರ ನಡವಳಿಕೆ ಅತ್ಯಂತ ಉತ್ತಮವಾಗಿದೆ. ಶಿಕ್ಷೆ ಅನುಭವಿಸುತ್ತಿರುವ ಬೆನ್ನಲ್ಲೇ ಅವರ ತಾಯಿಯು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಜೈಲು ಮೇಲಧಿಕಾರಿಗಳು ಪೆರೋಲ್​ ನೀಡುವಂತೆ ಕೋರಿರುವ ಮನವಿಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ವಿಶೇಷ ಪೆರೋಲ್​ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ನಡವಳಿಕೆ ಉತ್ತಮವಾಗಿದ್ದರೂ, ಪೆರೋಲ್​ ನೀಡುವುದು ಉತ್ತಮವಾದದ್ದಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ವಿಶೇಷ ಪೆರೋಲ್​ ಮಂಜೂರು ಮಾಡಿ ಆದೇಶಿಸಿದೆ.

ಇದನ್ನೂ ಓದಿ:ಆಸ್ಪತ್ರೆಯ ನೋಂದಣಿ ರದ್ದುಪಡಿಸಲು ಮೂಲ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ: ಹೈಕೋರ್ಟ್

ABOUT THE AUTHOR

...view details