ಬೆಂಗಳೂರು: ಕಲ್ಲಿದ್ದಲು ಪೂರೈಕೆಯಾಗಲಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಯಥಾ ಸ್ಥಿತಿಯಲ್ಲಿರಲಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಾವೇರಿ ಭವನದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಲ್ಲಿದ್ದಲ್ಲಿನ ಉತ್ಪಾದನೆಯಲ್ಲಿ ಕೊರತೆಯಾಗಿದೆ. ಕರ್ನಾಟಕಕ್ಕೆ ತಲುಪಬೇಕಾಗಿದ್ದ ಕಲ್ಲಿದ್ದಲಿನ ಕೊರತೆಯಾಗಿದೆ ಅಂತಾ ಗೊತ್ತಾದ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಗಮನಕ್ಕೆ ಕೂಡ ತಂದಿದ್ದೇವೆ. ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆ ಆಗಲಾರದು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೀಪಾಲಂಕರ, ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ನವರಾತ್ರಿ ಸಂದರ್ಭದಲ್ಲಿ ಯಾವ ರೀತಿಯೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.
ಯಾವುದೇ ಉಹಾಪೋಹಗಳಿಗೆ ಆತಂಕ ಪಡೋದು ಬೇಡ. ರಾಯಚೂರಿನಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಿದ್ದೇವೆ, ಪರಿಸ್ಥಿತಿ ಸುಧಾರಿಸಲಿದೆ. ಎರಡು ರೇಕ್ ಕೇಳಿದ್ದೇವೆ. ನವೆಂಬರ್ ನೊಳಗೆ 2 ರೇಕ್ ಹಾಗೂ ಒಟ್ಟು 14 ರೇಕ್ ಕೇಳಿದ್ದೇವೆ. ಒಡಿಶಾ (ಎಂಸಿಎಲ್) ದಿಂದ ಭಾನುವಾರ ಒಂದು ರೇಕ್ ಲೋಡ್ ಆಗಿದೆ. ಅದು ಹೊರಟಿದೆ. ಇನ್ನೊಂದು ಸೋಮವಾರ ಮಧ್ಯಾಹ್ನ ಈಗ ಹೊರಟಿದೆ. ಮಂಗಳವಾರ ಕಲ್ಲಿದ್ದಲು ತಲುಪಲಿದ್ದು, ಅದನ್ನು ಬಳ್ಳಾರಿ, ರಾಯಚೂರಿಗೆ ಪೂರೈಕೆ ಮಾಡಲಾಗುವುದು. ಎಲ್ಲೂ ಪೂರೈಕೆ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.