ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಂಗಳವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವಿಗೀಡಾದ ಪ್ರಕರಣ ಸಂಬಂಧ ಆಡುಗೋಡಿ ಸಂಚಾರ ಪೊಲೀಸರ ಜೊತೆಗೆ ಕಾನೂನು ಸುವ್ಯವಸ್ಥೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಪಘಾತ ನಡೆಯುವ ಮುನ್ನ ಮೃತರು ಎಲ್ಲೆಲ್ಲಿ ಸುತ್ತಾಡಿದ್ದರು?, ಎಲ್ಲಿ ಪಾರ್ಟಿ ಮಾಡಿದ್ದರು? ಎಂಬುದರ ಬಗ್ಗೆ ಕೋರಮಂಗಲ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ, ಅವಘಡ ಸಂಭವಿಸುವ ಮುನ್ನ ಗಸ್ತು ಪೊಲೀಸರು ಹಾಗೂ ಡೆಲಿವರಿ ಬಾಯ್ ಪ್ರಾಣಾಪಾಯದಿಂದ ಪಾರಾಗಿರುವುದು ತಿಳಿದುಬಂದಿದೆ.
ಈ ಘಟನೆ ನಡೆಯುವ ಮುನ್ನ ಸೋನಿ ವರ್ಲ್ಡ್ ಟ್ರಾಫಿಕ್ ಸಿಗ್ನಲ್ ಬಳಿ ಕಾರನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದ ಶಾಸಕರ ಪುತ್ರ ಮತ್ತು ಸ್ನೇಹಿತರಿದ್ದ ಕಾರಿನಿಂದ ಜೊಮ್ಯಾಟೊ ಡೆಲಿವರಿ ಬಾಯ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಎನ್ಜಿವಿ ಸಿಗ್ನಲ್ ಬಳಿ ಕಾರನ್ನು ತಡೆಯಲು ಹೋದಾಗ ಪೊಲೀಸರ ಮೇಲೆ ಕಾರು ಹತ್ತಿಸಲು ಮುಂದಾಗಿದ್ದರಂತೆ. ಅಡ್ಡಾದಿಡ್ಡಿ (ಜಿಗ್‌ಜ್ಯಾಗ್) ರೀತಿಯಲ್ಲಿ ಯುವಕರ ಗುಂಪು ಕಾರು ಚಾಲನೆ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೂ ಮುನ್ನ ಕೋರಮಂಗಲದಲ್ಲೇ ಸುಮಾರು ಒಂದು ಗಂಟೆ ಕಾಲ ಜಾಲಿ ರೈಡ್ ಸೋಗಿನಲ್ಲಿ ಕಾರಿನಲ್ಲಿ ಸುತ್ತಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಕೋರಮಂಗಲ ಚೆಕ್‌ಪೋಸ್ಟ್ ಬಳಿಯೂ ಪೊಲೀಸರು ಕಾರು ತಡೆದು ಎಚ್ಚರಿಕೆ ನೀಡಿದ್ದರೂ ಎಚ್ಚೆತ್ತುಕೊಳ್ಳದೆ, ಎನ್ಜಿವಿ ಸಿಗ್ನಲ್ ಬಳಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಅದೃಷ್ಟವಶಾತ್ ಕಾರಿನ ವೇಗ ನೋಡಿ ಸ್ಥಳದಿಂದ ತಪ್ಪಿಸಿಕೊಂಡಿದ್ದೆವು ಎಂದು ಪೊಲೀಸರೊಬ್ಬರು ತಿಳಿಸಿದರು.
ಇದನ್ನೂ ಓದಿ:Bengaluru Accident.. ದುರಂತಕ್ಕೂ ಮುನ್ನ ಪೊಲೀಸರ ಎಚ್ಚರಿಕೆ ಕಡೆಗಣಿಸಿತಾ ಶಾಸಕ ಪುತ್ರನ ಗ್ಯಾಂಗ್?