ಬೆಂಗಳೂರು : ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು 27,38,21,221 ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 26,38,67,100 ರೂ. ಮೌಲ್ಯದ 4,25,127 ಲೀಟರ್ ಮದ್ಯ ವಶಪಡಿಸಿಕೊಂಡಿವೆ. 87,89,910 ರೂ. ಮೌಲ್ಯದ 131.12 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ವಿವಿಧ ಮಾದರಿಯ ವಾಹನಗಳು ವಶಕ್ಕೆ: ಅಬಕಾರಿ ಇಲಾಖೆಯು 792 ಗಂಭೀರ ಪ್ರಕರಣಗಳನ್ನು ಹಾಗೂ ಮದ್ಯದ ಪರವಾನಗಿ ಉಲ್ಲಂಘಿಸಿದ ಪ್ರಕರಣಗಳು 28 ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (a) ಅನ್ವಯ ಒಟ್ಟು 2,090 ಪ್ರಕರಣಗಳನ್ನು ದಾಖಲಿಸಿದೆ. ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ವಿಚಕ್ಷಣ ದಳ, ಕಣ್ಗಾವಲು ತಂಡಗಳು ಮತ್ತು ಪೊಲೀಸ್ 9,87,01,791 ರೂ. ಮೌಲ್ಯದ 25.24 ಕೆಜಿ ಚಿನ್ನ, 92,90,980 ರೂ. ಮೌಲ್ಯದ 134.42 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿವೆ. 12,48,57,991ರೂ ಮೌಲ್ಯದ ಕೊಡುಗೆ/ಉಡುಗೊರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ಜಪ್ತಿ ಮಾಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 627 ಪ್ರಥಮ ವರ್ತಮಾನ ವರದಿ (FIR) ದಾಖಲಿಸಿದ್ದಾರೆ.
ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 47,718 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. 11 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್ಪಿಸಿ ಕಾಯ್ದೆಯಡಿ 2,106 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 3,222 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 5,218 ಜಾಮೀನು ರಹಿತ ವಾರೆಂಟ್ಗಳನ್ನು ಜಾರಿಗೊಳಿಸಲಾಗಿದೆ. ಎಲ್ಲಾ ತಂಡಗಳು ಒಟ್ಟು 77,93,28,993 ರೂ. ನಗದು ಸೇರಿದಂತೆ ಮದ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಆಯೋಗ ತಿಳಿಸಿದೆ.