ಮಹದೇವಪುರ/ಬೆಂಗಳೂರು: ಪ್ರತಿಯೊಬ್ಬರೂ ಭಯ ಪಡದೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮನವಿ ಮಾಡಿದರು.
ವೈಟ್ ಫೀಲ್ಡ್ನ ಖಾಸಗಿ ಹೋಟೆಲ್ವೊಂದರಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಸಚಿವ ಭೈರತಿ ಬಸವರಾಜ್ ಮಾತನಾಡಿದರು. ಕೋವಿಡ್ ಪರೀಕ್ಷೆ ಮಾಡಲು ಬಂದಾಗ ನುಣುಚಿಕೊಳ್ಳಲು ಹೋಗಬೇಡಿ. ಮನೆಯಲ್ಲೇ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು. ಎಲ್ಲಾ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದರು.
ಕೋವಿಡ್ ನಿಯಂತ್ರಣ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ವೈದ್ಯರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಪಾಲಿಕೆ ಸದಸ್ಯರು, ಪಂಚಾಯತ್ ಅಧ್ಯಕ್ಷರು ಕೈ ಜೋಡಿಸಿ ಕರೊನಾ ನಿಯಂತ್ರಣ ಮಾಡಬೇಕಿದ. ದಿನನಿತ್ಯ ಕೋವಿಡ್ ಟೆಸ್ಟಿಂಗ್ ಹೆಚ್ಚಿಸಬೇಕಿದೆ ಎಂದು ಹೇಳಿದರು.
ಮಹದೇವಪುರ ವಲಯದ ಎಲ್ಲಾ ಅಧಿಕಾರಿಗಳು ಕೋವಿಡ್ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಟೆಸ್ಟಿಂಗ್ ಕಡಿಮೆ ಆಗಬಾರದು. ಬೇಕಾ ಬಿಟ್ಟಿ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದರು.