ಬೆಂಗಳೂರು:ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಅಡುಗೆಯವರಿಗೆ ಮತ್ತು ಸಹಾಯಕರಿಗೆ ಸೂಕ್ತ ವೇತನ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯಾಗಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ಎಂ.ಎಸ್.ನೌಹೇರಾ ಶೇಖ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆಯವರಿಗೆ 2,700 ರೂ. ಹಾಗೂ ಸಹಾಯಕರಿಗೆ 2,600 ರೂ. ನೀಡಲಾಗುತ್ತಿದೆ.
ಇತ್ತೀಚೆಗೆ ಮುಖ್ಯ ಅಡುಗೆ ತಯಾರಕರಿಗೆ 6 ಸಾವಿರ ರೂ. ಹಾಗೂ ಸಹಾಯಕರಿಗೆ 5 ಸಾವಿರ ರೂ. ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆ ಪರಿಗಣಿಸಿದರೆ ಸರ್ಕಾರಕ್ಕೆ ಹೆಚ್ಚುವರಿಯಾಗಿ 325.7 ಕೋಟಿ ರೂ. ವೆಚ್ಚ ತಗುಲಲಿದೆ. ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಇದನ್ನು ಪರಿಗಣಿಸುವುದು ಕಷ್ಟ. ಇನ್ನು ಬಿಸಿಯೂಟ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳೆರಡರ ಪಾಲೂ ಇದ್ದು, ಅಡುಗೆ ತಯಾಕರ ವೇತನದಲ್ಲಿ ರಾಜ್ಯದ ಪಾಲು ಹೆಚ್ಚಿಸಲಾಗಿದೆ ಎಂದರು.
ಅರ್ಜಿದಾರರ ಪರ ವಕೀಲರಾದ ಆಶಿಶ್ ಕೃಪಾಕರ್ ವಾದಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಕರ ಪಾತ್ರವೂ ಇದೆ. ಇದೊಂದೇ ಕೆಲಸವನ್ನು ನಂಬಿಕೊಂಡಿರುವ ಕೆಲಸಗಾರರೂ ಇದ್ದಾರೆ. ಸರ್ಕಾರದ ಪರ ವಕೀಲರು ಹೇಳುವಂತೆ 325 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆಯಾಗದು ಎಂದರು.
ವಾದ ಪ್ರತಿವಾದ ಆಲಿಸಿದ ಪೀಠ, ರಾಜ್ಯದ ನಿಲುವಿನ ಬಗ್ಗೆ ಮುಂದೆ ಚರ್ಚಿಸೋಣ. ಸದ್ಯಕ್ಕೆ ಕೇಂದ್ರದ ಪಾಲು ಕಡಿಮೆ ಇದೆ ಎಂದು ರಾಜ್ಯದ ಪರ ವಕೀಲರು ಹೇಳಿರುವುದರಿಂದ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಇಲಾಖೆಯನ್ನೂ ಪ್ರತಿವಾದಿ ಪಟ್ಟಿಗೆ ಸೇರಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಏ. 9ಕ್ಕೆ ಮುಂದೂಡಿತು.