ಬೆಂಗಳೂರು:ರಾಮನಗರದ ಬೈರಮಂಗಲ ಜಲಾಶಯದ ಮೂಲಕ ಹಾದು ಹೋಗುವ ವೃಷಭಾವತಿ ನದಿ ಪಾತ್ರವನ್ನು ಬದಲಿಸುವ ಯೋಜನೆ ಪ್ರಶ್ನಿಸಿ ಸಲ್ಲಿಕೆಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಯೋಜನೆ ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಅಧ್ಯಕ್ಷ ಎ.ಎನ್. ಯಲ್ಲಪ್ಪ ರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರಾದ ಬಿ. ವಿ. ವಿದ್ಯುಲತಾ ಅವರು ವಾದಿಸಿ, ನದಿ ಮಾರ್ಗವನ್ನು ಬದಲಿಸಲು ಯೋಜನೆ ರೂಪಿಸುವ ಮುನ್ನ ಸರ್ಕಾರ ತಜ್ಞರೊಂದಿಗೆ ಸಮಾಲೋಚಿಸಿಲ್ಲ. ಹೀಗಾಗಿ ನದಿ ಪಾತ್ರವನ್ನು ಬದಲಿಸಿದರೆ, ಅದು ಪರಿಸರದ ಮೇಲೆ ದೊಡ್ಡಮಟ್ಟದ ಪರಿಣಾಮಗಳನ್ನು ಬೀರಲಿದೆ ಎಂದು ವಿವರಿಸಿದರು.
ವಾದ ಆಲಿಸಿದ ಪೀಠ, ಅರ್ಜಿ ಸಂಬಂಧ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ರಾಜ್ಯ ಜಲ ಸಂಪನ್ಮೂಲ ಇಲಾಖೆ, ಪರಿಸರ ಮತ್ತು ಅರಣ್ಯ ಇಲಾಖೆ, ಕಾವೇರಿ ನೀರಾವರಿ ನಿಗಮ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಅರ್ಜಿಯಲ್ಲಿನ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಅಲ್ಲದೇ ಯೋಜನೆಗಾಗಿ ಹೈಕೋರ್ಟ್ ಅನುಮತಿ ಪಡೆಯದೆ ಯಾವುದೇ ಮರವನ್ನು ಕತ್ತರಿಸಬಾರದು ಎಂದು ಮಧ್ಯಂತರ ಆದೇಶ ನೀಡಿದ ಪೀಠ, ಯೋಜನೆಯ ಕಾಮಗಾರಿ ಈ ಅರ್ಜಿ ಕುರಿತು ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಸ್ಪಷ್ಟಪಡಿಸಿತು.