ಬೆಂಗಳೂರು: ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ತನ್ನ ಪ್ರಭಾವ ಬೀರಿ 1.5 ಕೋಟಿ ಹಣ ಪಡೆದಿದ್ದ ಆರೋಪದ ಮೇಲೆ ಹೀರೆಹಡಗಲಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಅಭಿನವ ಹಾಲಶ್ರೀ ಅವರನ್ನು ಬಂಧಿಸಲಾಗಿದೆ. ಈಗ ಅವರ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ 56 ಲಕ್ಷ ರೂಪಾಯಿಯನ್ನು ಮಠಕ್ಕೆ ತಲುಪಿಸುವಂತೆ ಹೇಳಿದ್ದಾರೆ ಎಂದು ವ್ಯಕ್ತಿಯೋರ್ವ ಕಂತೆ-ಕಂತೆ ನೋಟುಗಳನ್ನು ಮಠದ ಬಳಿ ಇಟ್ಟಿರುವ ವಿಡಿಯೋ ಹರಿಬಿಟ್ಟಿದ್ದಾರೆ.
ಸಿನಿಮೀಯ ಶೈಲಿಯಲ್ಲಿ ನಿನ್ನೆ ಸಿಸಿಬಿ ಪೊಲೀಸರು ಒಡಿಶಾದ ಕಟಕ್ನಲ್ಲಿ ಅಭಿನವ ಹಾಲಶ್ರೀ ಅವರನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿ ಸಪ್ಟೆಂಬರ್ 29 ರವರೆಗೆ ತಮ್ಮ ವಶಕ್ಕೆ ಪಡೆದು ಆಡುಗೋಡಿಯ ಟೆಕ್ನಿಕಲ್ ಸೆಂಟರ್ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ವ್ಯಕ್ತಿಯೋರ್ವರು 56 ಲಕ್ಷ ಹಣವಿರುವ ನೋಟು ಸಮೇತ ಪ್ರತ್ಯಕ್ಷರಾಗಿ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅಲ್ಲದೆ ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಜೀವ ಬೆದರಿಕೆಯಿದ್ದು ಪೊಲೀಸ್ ಭದ್ರತೆ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ ?: ಕೆಲ ದಿನಗಳ ಹಿಂದೆ ಅಭಿನವ ಹಾಲಶ್ರೀಯ ಕಾರು ಚಾಲಕ ರಾಜು ಎಂಬುವರು ಬಂದು 60 ಲಕ್ಷ ನೀಡಿದ್ದರು. ಅದರಲ್ಲಿ ವಕೀಲರ ಶುಲ್ಕವೆಂದು 4 ಲಕ್ಷ ರೂ. ಎಂದು ತೆಗೆದಿರಿಸಿಕೊಂಡು ಉಳಿದ 56 ಲಕ್ಷ ಹಣವನ್ನು ಹಿರೇಹಡಗಲಿ ಮಠಕ್ಕೆ ನೀಡಬೇಕೆಂದು ಸೂಚಿಸಿದ್ದ. ಇದರಂತೆ ಮಠಕ್ಕೆ ಬಂದು ಹಣ ನೀಡಿದ್ದೇನೆ ಎಂದು ವಿಡಿಯೋ ಮಾಡಿದ್ದಾರೆ.
ಸಿಸಿಬಿಗೂ ಪತ್ರ ಬರೆದ ವ್ಯಕ್ತಿ:ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಗೂ ತನಗೂ 8 ತಿಂಗಳಿಂದ ಪರಿಚಯವಿದೆ. ಸ್ವಾಮೀಜಿ ತಮ್ಮ ಮನೆಗೆ ಬಂದು ಆಶೀರ್ವಚನ ನೀಡುತ್ತಿದ್ದರು. ಇವರ ಬಗ್ಗೆ ನಂಬಿಕೆ ಹಾಗೂ ಗೌರವ ಹೆಚ್ಚಾಗಿತ್ತು. ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಆಘಾತವಾಯಿತು. ಕೆಲ ದಿನಗಳ ಹಿಂದೆ ಚಾಲಕ ರಾಜು ತನ್ನ ಕಚೇರಿಗೆ ಬಂದಿದ್ದ. ಹೋಗುವಾಗ ಬ್ಯಾಗ್ ಬಿಟ್ಟು ಹೋಗಿದ್ದ. ಲಗೇಜ್ ಬ್ಯಾಗ್ ಅಂದುಕೊಂಡು ಸುಮ್ಮನಿದ್ದೆವು. ಕರೆ ಮಾಡಿ ಬ್ಯಾಗ್ ತೆಗೆದುಕೊಳ್ಳುವಂತೆ ಸೂಚಿಸಿದ್ದೆ. ಬ್ಯಾಗ್ ನಲ್ಲಿ ಇಟ್ಟಿದ್ದ 60 ಲಕ್ಷ ಪೈಕಿ 4 ಲಕ್ಷ ವಕೀಲರಿಗೆ ಶುಲ್ಕ ಭರಿಸಲು ತೆಗೆದುಕೊಂಡಿದ್ದೇನೆ. ಉಳಿದ ಹಣವನ್ನು ಹಿರೇಹಡಗಲಿ ಮಠದ ಪೂಜಾರಿ ಹಾಲಸ್ವಾಮಿಗೆ ತಲುಪಿಸಿ ಎಂದು ಸ್ವಾಮೀಜಿಯವರು ಹೇಳಿದ್ದಾರೆ ಎಂದಿದ್ದಾನೆ. ಮೂರು ನಾಲ್ಕು ದಿನವಾದರೂ ಬ್ಯಾಗ್ ತೆಗೆದುಕೊಳ್ಳಲು ಬರದ ಕಾರಣ ನಾನೇ ಮಠಕ್ಕೆ ಹೋಗಿ ಹಣ ತಲುಪಿಸಿದ್ದೇನೆ. ಸ್ವಾಮೀಜಿಯವರ ವ್ಯವಹಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಮುಂದಿನ ತನಿಖೆಗೆ ಸುಲಭವಾಗಲು ಈ ಮಾಹಿತಿ ನೀಡುತ್ತಿದ್ದೇನೆ. ಅಲ್ಲದೆ ತನಗೂ ಜೀವ ಭಯವಿದ್ದು, ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಪ್ರಣವ್ ಪ್ರಸಾದ್ ಎಂಬುವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಉದ್ಯಮಿಗೆ ವಂಚನೆ ಪ್ರಕರಣ: ಸೆಪ್ಟೆಂಬರ್ 29ರವರೆಗೆ ಅಭಿನವ ಹಾಲಶ್ರೀ ಸ್ವಾಮೀಜಿ ಸಿಸಿಬಿ ಕಸ್ಟಡಿಗೆ