ಬೆಂಗಳೂರು: ಕಾಂಗ್ರೆಸ್ ಬಿಜೆಪಿ ವಿರುದ್ಧ ಭ್ರಷ್ಟಾಚಾರ ದರ ಕಾರ್ಡ್ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ ರೂ. ವೆಚ್ಚವಾದರೆ, ಸಚಿವ ಸ್ಥಾನಕ್ಕೆ 500 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಭ್ರಷ್ಟಾಚಾರ ದರ ಕಾರ್ಡ್ ಬಿಡುಗಡೆ ಮಾಡಿ ಎಐಸಿಸಿ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರು ಈ 40% ಕಮಿಷನ್ ಸರ್ಕಾರವನ್ನು ತೆಗೆದು ಹಾಕಲಿದ್ದಾರೆ. ರೈತರು, ಮಹಿಳೆಯರು, ಯುವಕರು, ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳು ಈ 40% ಸರ್ಕಾರದ ದುರಾಡಳಿತಕ್ಕೆ ಬಲಿಯಾಗಿವೆ. ಬಿಜೆಪಿ ರಾಷ್ಟ್ರೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪ್ರವಾಸ ಮಾಡುತ್ತಿದ್ದು, ಉಳಿದ ನಾಲ್ಕು ದಿನಗಳಲ್ಲಿ ಈ ನಾಯಕರು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಉತ್ತರ ನೀಡಬೇಕು ಎಂದು ಖೇರಾ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕಾರ್ಡ್ಬಲ್ಲಿ, ಕಮಿಷನ್ ವೆಚ್ಚಗಳ ವಿವರಗಳಿವೆ. ವಿವಿಧ ಡೀಲ್‌ಗಳಿಗೆ ಶೇ 40ರಷ್ಟು ಸರ್ಕಾರದ ಬೇಡಿಕೆ ಎಂದು ಕಾರ್ಡ್‌ನಲ್ಲಿ ಉಲ್ಲೇಖಿಸಲಾಗಿದೆ. ಇದು ಮಠದ ಅನುದಾನಗಳಿಗೆ 30% ಕಮಿಷನ್‌ನೊಂದಿಗೆ ಪ್ರಾರಂಭವಾಗುತ್ತದೆ. ರಸ್ತೆ ಒಪ್ಪಂದಗಳಿಗೆ 40% ಮತ್ತು ಕೋವಿಡ್ 19 ಪೂರೈಕೆಗಳಿಗೆ 75% ವರೆಗೆ ಹೋಗುತ್ತದೆ ಎಂದು ವಿವರಿಸಿದೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಒಂದು ಭ್ರಷ್ಟಾಚಾರ ಕಾರ್ಡ್‌ನಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಪ್ರದರ್ಶಿಸಲಾಗಿದೆ.
ಮಣಿಪುರ ಉರಿಯುತ್ತಿದ್ದು, ಮೋದಿ, ಶಾ ಪ್ರಚಾರದಲ್ಲಿದ್ದಾರೆ:ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವಾಗ ಪ್ರಧಾನಿ ಹಾಗೂ 7 ಕೇಂದ್ರ ಸಚಿವರು ರಾಜ್ಯ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಇದೊಂದು ಗಂಭೀರ ವಿಚಾರ. ಕೇಂದ್ರ ಬಿಜೆಪಿ ಸರ್ಕಾರದ ಆದ್ಯತೆಯೂ ಇಲ್ಲಿ ಬಹಿರಂಗವಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿರುವಾಗ, ಅನೇಕ ಜೀವಗಳ ಬಲಿಯಾಗಿರುವಾಗ ಪ್ರಧಾನಿ 9 ಗಂಟೆಗಳ ರೋಡೋ ಶೋನಲ್ಲಿ ಮಗ್ನರಾಗಿದ್ದಾರೆ. ಅವರಿಗೆ ಚುನಾವಣೆ ಹೊರತಾಗಿ ಬೇರೆ ಯಾವುದೂ ಮುಖ್ಯವಲ್ಲ. ಅವರಿಗೆ ಆಡಳಿತ ಗೊತ್ತಿಲ್ಲ. ಪ್ರಧಾನಮಂತ್ರಿಗಳು, ಗೃಹ ಸಚಿವರು ಹಾಗೂ ಮಂತ್ರಿಗಳು ಕರ್ನಾಟಕದಲ್ಲಿದ್ದಾರೆ. ಮಣಿಪುರದ ಜನ ನಿಮ್ಮನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.