ಬೆಂಗಳೂರು: ಪಂಚರತ್ನ ರಥಯಾತ್ರೆ ಆರಂಭದ ನಂತರ ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಗಲಿಬಿಲಿ ಪ್ರಾರಂಭವಾಗಿದೆ. ಈಗ ಬರುತ್ತಿರುವ ಸಮೀಕ್ಷೆಗಳಲ್ಲಿ ಇವೆರಡೂ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸಭೆ ನಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಶ್ರೀನಿವಾಸ ಕಲ್ಯಾಣ ಮುಗಿದ ನಂತರ ದೇವರ ಅನುಗ್ರಹ ಪಡೆದು 97 ರಿಂದ 116 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಶಕ್ತಿ 1994ರಿಂದ ವಿಶ್ಲೇಷಣೆ ಮಾಡಿದರೆ ಈ ಚುನಾವಣೆಯಲ್ಲಿ 65 ರಿಂದ 70 ಸ್ಥಾನ ಗಳಿಸಬಹುದು. ಬಿಜೆಪಿ ಕೂಡ 50 ರಿಂದ 60 ಕ್ಷೇತ್ರ ಗೆಲ್ಲಬಹುದು. ಇದರಲ್ಲೂ ಯಾವುದೇ ಅಚ್ಚರಿ ಇಲ್ಲ ಎಂದರು.
ಡಿಕೆಶಿಗೆ ಟಾಂಗ್:ಕಾಂಗ್ರೆಸ್ ಅಧ್ಯಕ್ಷರ ಪ್ರಕಾರ 15 ರಿಂದ 20 ಜನ ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿದ್ದರು. ಆದರೆ ಅವರ ಪಕ್ಷದಿಂದ ಯಾರು ಯಾರು ಹೊರಗೆ ಹೋಗುತ್ತಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ ಎಂದು ಟಾಂಗ್ ಕೊಟ್ಟರು.
ಭದ್ರಕೋಟೆ ಒಡೆಯಲು ಸಾಧ್ಯವಿಲ್ಲ: ನನಗೆ ಕಾಂಗ್ರೆಸ್-ಬಿಜೆಪಿ ಮನೆ ಬಾಗಿಲಿಗೆ ಹೋಗುವ ಸ್ಥಿತಿಯನ್ನು ಜನರು ತರವುದಿಲ್ಲ. ಕಾಂಗ್ರೆಸ್ ಏನೇ ಮಾಡಿದರೂ ನಮ್ಮ ಭದ್ರಕೋಟೆ ಒಡೆಯಲು ಸಾಧ್ಯವಿಲ್ಲ. ಏನೇ ಕಾರ್ಯತಂತ್ರ, ಜಾತಿವಾರು ಸಭೆ-ಸಮಾವೇಶ ಮಾಡಿದರೂ ಅಸಾಧ್ಯ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಈ ಬಾರಿ ಜನರು ದೂರ ಇಡುತ್ತಾರೆ ಎಂದು ಭವಿಷ್ಯ ನುಡಿದರು.
ನಿಖಿಲ್ ರಾಜಕೀಯ ಭವಿಷ್ಯ ಜನರೇ ನಿರ್ಣಯಿಸುತ್ತಾರೆ:ನನ್ನ ಪುತ್ರ ನಿಖಿಲ್ ರಾಜಕೀಯ ಭವಿಷ್ಯವನ್ನು, ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನರೇ ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು. ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಹೆಚ್ಡಿಕೆ, ನಿಖಿಲ್ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡುವುದಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ. ನನಗೆ ನಿಖಿಲ್ ಅವರನ್ನು ಹೇಗೆ ದಡ ಸೇರಿಸೋದು ಎಂಬ ಚಿಂತೆ ಇಲ್ಲ. ನನಗೆ ಇರೋದು ನಾಡಿನ ಜನರ ಚಿಂತೆ ಎಂದು ಹೇಳಿದರು.
ಇದನ್ನೂ ಓದಿ:ನಾನು ಯಾರಿಗೂ ಕ್ಷಮೆ ಕೇಳಲ್ಲ, ಕೇಳುವ ಅಗತ್ಯವೂ ಇಲ್ಲ: ಡಿ ಕೆ ಶಿವಕುಮಾರ್