ಬೆಂಗಳೂರು:ಸಾಮಾಜಿಕ ಜಾಲಾತಾಣ ಪೇಸ್ಬುಕ್ ಖಾತೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಸಂದೇಶವುಳ್ಳ ದೃಶ್ಯ ಪೋಸ್ಟ್ ಮಾಡಿದ್ದ ರಾಯಚೂರಿನ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ರಾಯಚೂರು ಜಿಲ್ಲೆಯ ಮಾನ್ವಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿ ಕೆ.ಎಂ.ಭಾಷಾ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ಐಪಿಸಿ ಸೆಕ್ಷನ್ 505 ರಡಿ ದಾಖಲಾಗಿದ್ದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕಾಗ್ನಿಜೆನ್ಸ್ ತೆಗೆದುಕೊಳ್ಳುವುದಕ್ಕೂ ಮುನ್ನ ಅಪರಾಧ ದಂಡ ಸಂಹಿತೆ ಸೆಕ್ಷನ್ 196(1)(ಎ) ಅಡಿ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ತನಿಖಾಧಿಕಾರಿಗಳು ಈ ನಿಯಮವನ್ನು ಪಾಲಿಸಿಲ್ಲ. ಅಲ್ಲದೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 505ರಡಿ ಕಾಗ್ನಿಜೆನ್ಸ್ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದ ಮತ್ತು ಆರೋಪಪಟ್ಟಿ ಸಲ್ಲಿಸಿದ್ದನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಜೊತೆಗೆ, ನಿಯಮಾವಳಿ ಪ್ರಕಾರ ಅಂತಹ ಪೂರ್ವಾನುಮತಿ ಪಡೆಯುವ ಮುನ್ನ ಸಿಆರ್‌ಪಿಸಿ ಸೆಕ್ಷನ್ 196(3) ಅಡಿ ಸೂಚಿಸಲಾಗಿರುವ ಸಕ್ಷಮ ಪ್ರಕಾರದ ವ್ಯಕ್ತಿ ಸೆಕ್ಷನ್ 505ರಡಿ ಹೊರಿಸಿರುವ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಆದನ್ನು ಮಾಡಿಲ್ಲ ಎಂದು ಹೇಳಿರುವ ನ್ಯಾಯಪೀಠ, ತನಿಖಾ ಸಂಸ್ಥೆ ಕಾನೂನು ಪ್ರಕಾರ ಹೊಸದಾಗಿ ಆರೋಪದ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 196 ಅನ್ವಯ ತನಿಖೆ ನಡೆಸಬಹುದು, ಅದಕ್ಕೆ ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.