ಬೆಂಗಳೂರು: ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಗಳನ್ನ, ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಭಾರತದ ವಾಘಾ ಗಡಿವರೆಗೂ ಬಿಟ್ಟು ಬರಲು ಪ್ರಯಾಣ ಬೆಳೆಸಿದ್ದಾರೆ. ಕೆಲ ದಿನಗಳ ಹಿಂದೆ ಕಿರಣ್ ಗುಲಾಮ್ ಅಲಿ ಹಾಗೂ ಖಾಸಿಫ್ ಸಂಶುದ್ದೀನ್ ಜೋಡಿಯನ್ನ ಪಾಕಿಸ್ತಾನಕ್ಕೆ ಬಿಟ್ಟು ಬರುವಂತೆ ಹೈಕೋರ್ಟ್ ಆದೇಶಿಸಿತ್ತು.
ಹೀಗಾಗಿ ಪಾಕಿಸ್ತಾನಿ ಪ್ರಜೆಗಳು, ನಗರದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ, ರಾಜಧಾನಿ ಎಕ್ಸ್ಪ್ರೆಸ್ ಮೂಲಕ ಪ್ರಯಾಣಿಸುತ್ತಿದ್ದಾರೆ. ಅವರನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ದೆಹಲಿಗೆ ಕರೆದೊಯ್ದು, ಅಲ್ಲಿಂದ ವಾಘಾ ಬಾರ್ಡರ್ಗೆ ಬಿಟ್ಟು ಬರಲಿದ್ದಾರೆ.
ಏನಿದು ಪ್ರಕರಣ:
2017 ರ ಮೇ 25ರಲ್ಲಿ ಕೇರಳದ ಹುಡುಗ ಸಿಹಾದ್ ಕರಾಚಿಯಲ್ಲಿ ಯುವತಿಯನ್ನ ಲವ್ ಮಾಡಿದ್ದ. ಆನಂತರ ಆತ ಯುವತಿ ಹಾಗೂ ಆಕೆಯ ತಂಗಿ ಜೊತೆ ನೇಪಾಳದ ಮೂಲಕ ಭಾರತಕ್ಕೆ ಬಂದು, ನಗರದ ಕುಮಾರಸ್ವಾಮಿ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿದ್ದರು.
ಈ ಬಗ್ಗೆ ಖಚಿತ ಮಾಹಿತಿ ತಿಳಿದ ನಂತರ ಕುಮಾರಸ್ವಾಮಿ ಲೇಔಟ್ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ನೆಲೆಸಿದ್ದ ವಲಸಿಗರನ್ನ, ಮೇ 25, 2017 ರಂದು ಬಂಧಿಸಿದ್ದರು. ಈ ವೇಳೆ ಬಂಧಿತ ಪಾಕಿಸ್ತಾನಿಗಳು ಅಕ್ರಮವಾಗಿ ಭಾರತದ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದರು.
ನಂತರ ತನಿಖೆಯ ವೇಳೆ ಆರೋಪಿಗಳು ಅಕ್ರಮವೆಸಗಿರೋದು ಪತ್ತೆಯಾಗಿ, ಎರಡು ವರ್ಷದಿಂದ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಅಪರಾಧಿಗಳು ಇತ್ತೀಚೆಗೆ ತಮಗೆ ಆದ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಲು ಅರ್ಜಿ ಹಾಕಿದ್ದರು. ಈ ವೇಳೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹೈ ಕೋರ್ಟ್, ಅನ್ಯ ದೇಶದ ಅಪರಾಧಿಗಳ ಗಡಿಪಾರಿಗೆ ಸೂಚನೆ ನೀಡಿತ್ತು.