ದೊಡ್ಡಬಳ್ಳಾಪುರ: ಬೈಕ್ ಮತ್ತು ಕಾರು ನಡುವೆ ಇತ್ತೀಚೆಗೆ ನಡೆದ ಅಪಘಾತದಲ್ಲಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆತ ಕೊನೆಗೂ ಬದುಕುಳಿಯಲಿಲ್ಲ. ಇದೀಗ ಮೃತ ಯುವಕನ ಕುಟುಂಬದವರು ಆತನ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕಂಚಿಗನಾಳ ಗ್ರಾಮದ ಅನಿಲ್ ಕುಮಾರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನವೆಂಬರ್ 28 ರಂದು ರಾಜಘಟ್ಟದ ಪೆಟ್ರೋಲ್ ಬಂಕ್ ಬಳಿ ನಡೆದ ದುರ್ಘಟನೆಯಲ್ಲಿ ಇವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ರಮೇಣ, ಪ್ರಜ್ಞೆ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯುವಕನ ಬ್ರೈನ್ ಡೆಡ್ ಆಗಿದೆ. ಚೇತರಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲದೇ ಇದ್ದುದರಿಂದ ವೈದ್ಯರು ಯುವಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ.