ಕರ್ನಾಟಕ

karnataka

ETV Bharat / state

ನಂದಿನಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ಕೀಳು ರಾಜಕೀಯ: ಸಿಎಂ ಬೊಮ್ಮಾಯಿ - ಈಟಿವಿ ಭಾರತ ಕನ್ನಡ

ನಂದಿನಿ ವಿಚಾರದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ ಪಕ್ಷಗಳು ಜನರ ಹಾದಿ ತಪ್ಪಿಸುತ್ತಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

oppositions-cheap-politics-in-nandini-issue-says-cm-basavaraja-bommai
ನಂದಿನಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ಕೀಳು ರಾಜಕೀಯ: ಸಿಎಂ ಟೀಕೆ..!

By

Published : Apr 10, 2023, 9:27 PM IST

ಬೆಂಗಳೂರು : ನಂದಿನಿ ವಿವಾದಕ್ಕೆ ತೆರೆ ಎಳೆಯುವಂತೆ ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಟ್ವೀಟ್ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಿಪಕ್ಷಗಳು ಕೀಳು ರಾಜಕೀಯ ಮಾಡುತ್ತಿವೆ ಎಂದು ಟೀಕಿಸಿದ್ದಾರೆ.

ನಮ್ಮ ನಂದಿನಿ ಹಾಲಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಎಲ್ಲಾ ರಾಜ್ಯಗಳಲ್ಲಿಯೂ ಇದು ದೊರೆಯುತ್ತಿದ್ದು, ಹೊರ ದೇಶಗಳಿಗೂ ರಫ್ತಾಗುತ್ತಿದೆ. 2018ರಲ್ಲಿ ಪ್ರತಿದಿನ 84 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿತ್ತು. ಪ್ರಸ್ತುತ 94 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಸಾಕು, ನಂದಿನಿಯ ಬ್ರಾಂಡ್ ಮೌಲ್ಯ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂಬುದು ತಿಳಿಯುತ್ತದೆ. ಆದರೆ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು, ನಂದಿನಿ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಜನರಲ್ಲಿ ಗೊಂದಲ ಉಂಟು ಮಾಡುವ ಕೀಳು ರಾಜಕೀಯ ಮಾಡುತ್ತಿವೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಬೊಮ್ಮಾಯಿ‌ ಟ್ವೀಟ್ ಮಾಡಿದ್ದಾರೆ.

ಹಾಲಿನ ಬಗ್ಗೆ ಹುಸಿ ಪ್ರೀತಿ ತೋರುವವರು ಗೋಮಾತೆಯ ರಕ್ಷಣೆಗೆ ಎಂದಾದರೂ ನಿಂತಿದ್ದರೇ?. 2010ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದವರು ಬಿ.ಎಸ್.‌ಯಡಿಯೂರಪ್ಪ. ಕಾಂಗ್ರೆಸ್ ಪರಂಪರೆಯ ಅಂದಿನ ರಾಜ್ಯಪಾಲರು ಅದಕ್ಕೆ ಸಹಿ ಮಾಡಲಿಲ್ಲ. 2020ರಲ್ಲಿ ಮತ್ತೆ ಕಾಯ್ದೆ ಜಾರಿಗೆ ತಂದಿದ್ದೂ ನಾವೇ.‌ ಗೋಹತ್ಯೆ ನಿಷೇಧದ‌ ಬಗ್ಗೆ ಜಾಣಮೌನ ವಹಿಸುವ ಜೆಡಿಎಸ್ ರಾಜಕೀಯಕ್ಕಾಗಿ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಸಿಂಗಾಪುರ್, ದುಬೈ, ಸೌದಿ ಅರೇಬಿಯಾದಂಥ ವಿದೇಶಿ ಮಾರುಕಟ್ಟೆಯಲ್ಲಿ ನಂದಿನಿ ಯಶಸ್ವಿ ವ್ಯವಹಾರ ನಡೆಸಲು ಬಿಜೆಪಿ‌ ಕಾರಣ. ಕೆಎಂಎಫ್‌ನ ಶೇ.15 ವಹಿವಾಟು ಹೊರ ರಾಜ್ಯಗಳಿಂದಲೇ ಆಗುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಹೈನುಗಾರಿಕೆಗೆ ಬಿಜೆಪಿ ನೀಡಿದಷ್ಟು ಪ್ರೋತ್ಸಾಹ ‌ಹಿಂದಿನ ಯಾವ ಆಡಳಿತವೂ ನೀಡಿಲ್ಲ. 25 ಲಕ್ಷ ಹೈನುಗಾರರಿಗೆ ಸಾಲ ಸೌಲಭ್ಯಕ್ಕಾಗಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಗೋಹತ್ಯೆ ನಿಷೇಧ‌ ಕಾಯ್ದೆ ಜಾರಿ ತರಲಾಗಿದೆ. ಮೆಗಾ ಡೈರಿಗಳನ್ನು ಸ್ಥಾಪನೆ ಮಾಡಲಾಗಿದೆ.

ದೊಡ್ಲ (ತೆಲಂಗಾಣ), ಹೆರಿಟೇಜ್ (ಆಂಧ್ರ), ಆರೋಕ್ಯ (ತಮಿಳುನಾಡು), ಮಿಲ್ಕಿ ಮಿಸ್ಟ್ ( ತಮಿಳುನಾಡು), ತಿರುಮಲ (ತಮಿಳುನಾಡು), ಹಟ್ಸನ್ (ತಮಿಳುನಾಡು) ಈ ಎಲ್ಲವೂ ನಂದಿನಿ‌ ಎದುರಿಸಿದ ಬ್ರ್ಯಾಂಡ್‌ಗಳೇ. ಹಾಲಿನ ಹುಡಿ ಉತ್ಪಾದನೆ ಸಾಮರ್ಥ್ಯವನ್ನು ದಿನಕ್ಕೆ 320 ಟನ್‌ಗೆ ಹೆಚ್ಚಿಸಿದ್ದು ನಾವು. ನಂದಿನಿ ಮೂಲಕ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹೈನುಗಾರರ ದಿಕ್ಕು ತಪ್ಪಿಸಬಹುದು ಎಂಬುದು ಜೆಡಿಎಸ್ ಮತ್ತು ಕಾಂಗ್ರೆಸ್‌ನ ಹುನ್ನಾರ. ಆದರೆ, ಎಲ್ಲಾ ರೀತಿಯಿಂದಲೂ ಪ್ರಪಂಚಕ್ಕೆ ತೆರೆದುಕೊಂಡಿರುವ ಕರ್ನಾಟಕದ ಹೈನುಗಾರರು ನಿಮ್ಮ ಅಗ್ಗದ ಚುನಾವಣಾ ಪ್ರಚಾರಕ್ಕೆ ಮಾರು ಹೋಗುವುದಿಲ್ಲ ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದೆ.

ಇದನ್ನೂ ಓದಿ :ಶೀಘ್ರದಲ್ಲೇ ನಂದಿನಿ ವಿವಾದ ತಣಿಸುವಂತೆ ರಾಜ್ಯ ಘಟಕಕ್ಕೆ ಬಿಜೆಪಿ ಹೈಕಮಾಂಡ್ ಸೂಚನೆ

ABOUT THE AUTHOR

...view details