ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಳೆ ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿರುವುದರಿಂದ ಆಟೋ ಸೇವೆ ವ್ಯತ್ಯಯವಾಗಲಿದೆ. ಅಂದಾಜು 2 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿರುವುದರಿಂದ ಪ್ರಯಾಣಿಕರು ಪರದಾಡುವ ಸಾಧ್ಯತೆ ಇದೆ.
ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು, ಕಾನೂನು ಬಾಹಿರವಾಗಿ ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕರಿಗೆ ಬಾಡಿಗೆ ಸರಿಯಾಗಿ ಸಿಗುತ್ತಿಲ್ಲ. ನ್ಯಾಯಬದ್ಧವಾಗಿ ಸರ್ಕಾರಕ್ಕೆ ಕಳೆದ 60 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದರು ರಾಜ್ಯ ಸರ್ಕಾರ ಕ್ರಮಕೈಗೊಳ್ಳದೆ ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತಿದೆ. ಇದರಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ. ಕೂಡಲೇ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಬೆಂಗಳೂರು ಚಾಲಕರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಂ ಮಂಜುನಾಥ್ ಹೇಳಿದ್ದಾರೆ.
ವಾಹನಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ :ಕಾನೂನು ಬಾಹಿರ ವೈಟ್‌ಬೋರ್ಡ್ ಟ್ಯಾಕ್ಸಿ ರದ್ದು ಮಾಡಬೇಕು, ರಾಪಿಡೋ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕು ಎಂದು ಮೂರು ದಿನಗಳ ಗಡುವು ನೀಡಿದ್ದೆವು. ವಾಹನಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ ನಡೆಸಿದ್ದೆವು. ಆದರೆ ನಮ್ಮ ಬೇಡಿಕೆ ಈಡೇರದ ಕಾರಣ ನಾಳೆ ಆಟೋ ಸೇವೆ ಬಂದ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.