ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವನ್ನು ನಿರುದ್ಯೋಗ ದಿನ ಎಂದು ಆಚರಣೆ ಮಾಡುವಂತಾಗಿದೆ. ಅಂದರೇ ಎಷ್ಟರ ಮಟ್ಟಿಗೆ ದೇಶದ ವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದೇ ಜ್ವಲಂತ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವ ಎನ್ನುವ ನಶೆಯನ್ನು ಯುವಕರಿಗೆ ನೀಡಿ, ಅಧಿಕಾರಕ್ಕೆ ಬಿಜೆಪಿ ಬಂದಿದೆ. ಯುವಕರಿಗೆ ಉದ್ಯೋಗದ ಆಸೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಇಂದು ನಿರಾಸೆಗೊಂಡಿದೆ. ಅದೇ ಯುವಕರು ನಿರುದ್ಯೋಗ ದಿನ ಆಚರಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕ ವ್ಯವಸ್ಥೆ ಕುಸಿಯಲು ನೇರ ಕಾರಣ. ತಾವು ಕೊಟ್ಟ ಒಂದೇ ಒಂದು ಭರವಸೆ ಈವರೆಗೆ ಈಡೇರಿಸಿಲ್ಲ. ಇಡೀ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ರಾಜ್ಯ ಬಿಜೆಪಿ ಒಂದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡ ಸಾಲದ ಹೊರೆ ಹೊತ್ತಿದ್ದಾರೆ ಎಂದರು.
1.5 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಸರ್ಕಾರದಲ್ಲಿ ದುಡ್ಡಿಲ್ಲ ಅಂದ್ರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಸಾಲ ತೆಗೆದುಕೊಂಡಷ್ಟು ಬಡ್ಡಿ ಜಾಸ್ತಿಯಾಗುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷದ ಅವಧಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಆರ್ಥಿಕ ಶಿಸ್ತು ದಾಟಿದ್ದು, ಈಗ ಖಾಲಿ ಕೈಯಲ್ಲಿ ಸಿಎಂ ದೆಹಲಿಯಿಂದ ಹಿಂದಿರುಗಿದ್ದಾರೆ. ಇದನ್ನು ಮುಚ್ಚಿಡಲು ಮಂತ್ರಿ ಮಂಡಲ ವಿಸ್ತರಣೆ ಎಂದು ಹೇಳಿದ್ದಾರೆ ಎಂದರು.
ಇದಕ್ಕೂ ಪಕ್ಷದ ಹೈಕಮಾಂಡ್ ಒಪ್ಪಿಕೊಂಡಿಲ್ಲ. ಇನ್ನೊಂದು ವರ್ಷದಲ್ಲಿ ಮತ್ತೊಂದು ಲಕ್ಷ ಕೋಟಿ ಸಾಲ ಮಾಡಿದ್ರೆ ಯಾರು ಹೊಣೆ? ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದರು.