ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಆಂತರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯ ಮತ್ತು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ಸರ್ಕಾರ ಆದಷ್ಟು ಬೇಗ ಹೋಗುವುದು ಒಳ್ಳೆಯದು. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ತಮ್ಮ ಪಕ್ಷದಲ್ಲಿ ನಡೆಯುತ್ತಿರುವ ಜಗಳವನ್ನು ಮುಚ್ಚಿಕೊಳ್ಳಲು, ಅವರು ಈ ರೀತಿ ಸುಳ್ಳಿನ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಜಾರಕಿಹೊಳಿಯವರು ನಮ್ಮ ಪಕ್ಷ ಬಿಟ್ಟು ಹೋದಾಗ ಮಹೇಶ್ ಕುಮಟಳ್ಳಿ ಬಿಟ್ಟರೆ, ಬೇರೆ ಶಾಸಕರು ಅವರ ಜೊತೆ ಇರಲಿಲ್ಲ. ಜೆಡಿಎಸ್‍ನ ಮೂವರು, ನಮ್ಮ ಪಕ್ಷದ 14 ಮಂದಿ ಆಪರೇಷನ್ ಕಮಲದಿಂದ ಬಿಜೆಪಿಗೆ ಹೋದರು. ಅಧಿಕಾರ ಮತ್ತು ಹಣಕ್ಕಾಗಿ ಅವರು ಪಕ್ಷಾಂತರ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದ್ರು.
ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ರಹಸ್ಯ ಸಭೆ ನಡೆಸಿರುವುದನ್ನು ಮುಚ್ಚಿಡಲು ಈ ರೀತಿ ಹೇಳುತ್ತಿದ್ದಾರೆ. ಮಹೇಶ್ ಕುಮಟಳ್ಳಿ ಬಿಟ್ಟರೆ ಮೂರನೆಯವರು ಅವರ ಜೊತೆ ಇರಲಿಲ್ಲ ಎಂದರು.
ಬಿಜೆಪಿಯಲ್ಲಿ ಬೆಂಕಿ ಬಿದ್ದಿದ್ದು, ಯಡಿಯೂರಪ್ಪ ನಮ್ಮ ನಾಯಕರಲ್ಲ. ಅವರ ಬರೇ ಉಖ್ಯಮಂತ್ರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಇದರಿಂದ ರವಾನೆಯಾಗುವ ಸಂದೇಶ ಏನು ಎಂದು ಕೇಳಿದರು.
ನಾವು ಬಿಜೆಪಿಯ ಆಂತರಿಕ ಭಿನ್ನಮತದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಕಚ್ಚಾಟದಿಂದ ಸರ್ಕಾರ ಹೋದರೆ ನಾವು ಜವಾಬ್ದಾರರಲ್ಲ. ಇಂಥ ಕೆಟ್ಟ ಸರ್ಕಾರ ಎಂದೂ ಬಂದಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.