ಬೆಂಗಳೂರು:ರಾಮ ಮಂದಿರ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಾಮಾನ್ಯ ಜನರು ರಾಜಕಾರಣ ಮಾಡುತ್ತಿಲ್ಲ ಹಾಗು ತಲೆಕೆಡಿಸಿಕೊಂಡಿಲ್ಲ. ಕಾಂಗ್ರೆಸ್ನವರು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ವಿರುದ್ಧ ಎಷ್ಟೇ ಪ್ರಕರಣ ಇರಲಿ, ಅವು ಕೋರ್ಟ್ನಲ್ಲಿವೆ. ಆದರೆ, ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಉದ್ದೇಶವೇನಿತ್ತು. ಹುಬ್ಬಳ್ಳಿಯಲ್ಲಿ ಅನೇಕ ರಾಮ ಮಂದಿರ ಪರವಾಗಿ ಹೋರಾಟ ಮಾಡಿ ಗಡಿಪಾರು ಆದವರು ಇದ್ದಾರೆ. ಇವರೊಬ್ಬರ ಮೇಲೆ ಏಕೆ ಈ ಸಂದರ್ಭದಲ್ಲಿ ಕ್ರಮ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಅವರು ವಿತಂಡ ವಾದ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ಹರಿಪ್ರಸಾದ್ ಮೇಲೆ ನಂಬಿಕೆ ಇಲ್ಲ. ಆದರೆ, ವಿತಂಡ ವಾದ ಮಾಡುವುದೇ ಅವರ ಸ್ವಭಾವ ಎಂದು ಹರಿಹಾಯ್ದಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಕೇವಲ ಪ್ರಧಾನಿ ಮೋದಿ ಹೋಗುತ್ತಿಲ್ಲ. ರಾಮ ಮಂದಿರಕ್ಕಾಗಿ ಯಾರು ಸೇವೆ, ಸಹಾಯ ಮಾಡಿದ್ದಾರೋ ಅವರನ್ನು ರಾಮ ಮಂದಿರ ಸಮಿತಿಯವರು ಕರೆದಿದ್ದಾರೆ. ಕಾಂಗ್ರೆಸ್ನವರು ಅದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗುಜರಾತಿನ ಸೋಮನಾಥ ಮಂದಿರ ಅತ್ಯಂತ ಅದ್ಭುತ ಮಂದಿರ, ಆಗಿನ ಪ್ರಧಾನಿ ನೆಹರು ಹೋಗಿರಲಿಲ್ಲ. ಹಾಗಾಗಿ, ವಲ್ಲಭಭಾಯಿ ಪಟೇಲರು ಹೋಗಿದ್ದರು. ಈಗಿನ ಪ್ರಧಾನಿ ಆಸ್ತಿಕರಿದ್ದಾರೆ, ರಾಮನ ಭಕ್ತರಿದ್ದಾರೆ. ಹೀಗಾಗಿ, ಅವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಆರೋಪಗಳಿಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಹರಿಪ್ರಸಾದ್ ಅವರ ಹೇಳಿಕೆ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ. ಗೋಧ್ರಾ ಮಾದರಿ ಹಿಂಸೆ ನಡೆಯಬಹುದು ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಒಬ್ಬ ಎಂಎಲ್ಸಿ ಗೆ ಇರುವ ಮಾಹಿತಿ ಗೃಹ ಇಲಾಖೆಗೆ ಇಲ್ಲ ಎಂದರೆ ಇಂಟೆಲಿಜೆನ್ಸ್ ವಿಫಲವಾಗಿದೆ. ಗೃಹ ಸಚಿವರು ಅಗತ್ಯ ಬಿದ್ದರೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ, ಬೇರೆಯವರು ಮಾಡಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ. ಆದರೆ, ಇವರ ಅವಧಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಅಕ್ರಮ ಸಾರಾಯಿ ದಂಧೆ, ಇಸ್ಪೀಟ್ ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗೃಹ ಇಲಾಖೆ ಮುಖ್ಯಸ್ಥರಾಗಿ ಪರಮೇಶ್ವರ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.