ಬೆಂಗಳೂರು:ಡಿಸೆಂಬರ್ ತಿಂಗಳಿನಲ್ಲಿ ಗಗನಕ್ಕೇರಿದ್ದ ಈರುಳ್ಳಿ ಬೆಲೆ, ಈಗ ಮತ್ತೆ ಕೆ.ಜಿ.ಗೆ ಇಪ್ಪತ್ತು ರೂಪಾಯಿ ಆಗಿದೆ. ರೈತರ ಎರಡನೇ ಬೆಳೆ ಮಾರುಕಟ್ಟೆಗೆ ಬಂದಿರುವುದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಈ ನಡುವೆ ಕೇಂದ್ರ ಸರ್ಕಾರ ನಮ್ಮ ದೇಶದ ಈರುಳ್ಳಿ ರಫ್ತನ್ನು ನಿಷೇಧ ಮಾಡಿರುವುದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ಎಪಿಎಂಸಿ ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಲೋಕೇಶ್, ಸದ್ಯಕ್ಕೆ ಮಹಾರಾಷ್ಟ್ರ ರಾಜ್ಯದ ಸೋಲಾಪುರ್, ನಾಸಿಕ್, ಅಹ್ಮದ್ ನಗರ್ ಹಾಗೂ ರಾಜ್ಯದ ವಿಜಯಪುರ ಜಿಲ್ಲೆಯಿಂದ ಈರುಳ್ಳಿಯ ಎರಡನೇ ಬೆಳೆ ಬರುತ್ತಿದೆ. ಇದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ರಫ್ತು ರದ್ದು ಮಾಡಿರುವುದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಕೇಂದ್ರ ಸರ್ಕಾರ ರೈತರಿಗಾಗುವ ನಷ್ಟ ತಡೆಯಲು ರಫ್ತು ಆರಂಭಿಸಿದರೆ ಒಳಿತು. ಹೀಗಾಗಿ ರೈತರ ರಕ್ಷಣೆಗಾಗಿ ರಫ್ತನ್ನು ಕೂಡಲೇ ಪುನಾರಂಭಿಸಬೇಕೆಂದು ಒತ್ತಾಯಿಸಿದರು.