ಬೆಂಗಳೂರು: ನ್ಯಾಯಾಲಯದ ಸೂಚನೆಯಂತೆ ಬೆಂಗಳೂರು ಮಹಾನಗರದಲ್ಲಿನ ಶೌಚಾಲಯಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿರುವ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್‌ಗೆ ತನ್ನ ವರದಿ ಸಲ್ಲಿಸಿದೆ. ಬೆಂಗಳೂರು ನಗರದಲ್ಲಿನ ಶೌಚಾಲಯಗಳ ಕೊರತೆ ಕುರಿತಂತೆ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿಜೆ ಪಿ.ಬಿ. ವರ್ಲೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲರು ವರದಿ ಸಲ್ಲಿಸಿದ್ದು ಅದರಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 803 ಶೌಚಾಲಯಗಳಿವೆ. ಪಾಲಿಕೆ ಹೊಸದಾಗಿ 800 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಹಾಲಿ ಇರುವ 196 ಶೌಚಾಲಯಗಳು ದುಸ್ಥಿತಿಯಲ್ಲಿದ್ದು ಅವುಗಳನ್ನು ನವೀಕರಿಸಬೇಕಾಗಿದೆ ಎಂದು ತಿಳಿಸಲಾಗಿದೆ.
ಅಲ್ಲದೆ, ಪಾಲಿಕೆಯ ಜತೆ ಸೇರಿ ನಡೆಸಿದ ಅಧ್ಯಯನದಲ್ಲಿ ಬೆಂಗಳೂರು ನಗರದಲ್ಲಿ ಹೊಸದಾಗಿ 600ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, 100 ಮಹಿಳಾ ಶೌಚಾಲಯಗಳ, 204 ಸಾರ್ವಜನಿಕ ಶೌಚಾಲಯಗಳು, 64 ಒಡಿಎಫ್ ಪ್ಲಸ್ ಪ್ಲೆಸ್ ಶೌಚಾಲಯಗಳನ್ನು ನಿರ್ಮಿಸುವ ಪ್ರಸ್ತಾವವಿದೆ. ಆ ಕುರಿತು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಹಾಲಿ ಇರುವ ಶೌಚೌಲಯಗಳ ಪೈಕಿ ೧೯೬ರ ನವೀಕರಿಸಬೇಕಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.