ಬೆಂಗಳೂರು :ಕಾವೇರಿ ನೀರಿನ ವಿಚಾರವಾಗಿ ಪ್ರಧಾನಮಂತ್ರಿಗಳ ಕಚೇರಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಪತ್ರ ಬರೆಯುತ್ತಲೇ ಇದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ವಾರ ಅವಕಾಶ ಸಿಗಬಹುದೆಂದು ನಂಬಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಕೇವಲ ಕುಡಿಯಲು ಮತ್ತು ನಮ್ಮ ರೈತರ ಬೆಳೆಗಳಿಗೆ ಸಾಕಾಗುವಷ್ಟು ಮಾತ್ರ ನೀರಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂದು ಸ್ಪಷ್ಟವಾಗಿ ಕಾವೇರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.
ಬಿಜೆಪಿ ಮೇಲೆ ಪದೇ ಪದೆ ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ಅಧಿಕಾರ ಕೈಬಿಟ್ಟು ಹೋಗಿರುವುದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಇಬ್ಬರೂ ಅನವಶ್ಯಕ ರಾಜಕಾರಣ ಮಾಡುತ್ತಿದ್ದಾರೆ. ನಾವು ಇವರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ರಾಜ್ಯದ ಹಿತ ಹಾಗೂ ಅಭಿವೃದ್ಧಿ ಮುಖ್ಯ ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಆಸ್ಪದ ಕೊಡಬೇಡಿ, ಆರ್ಟಿಐ ದುರ್ಬಳಕೆಗೆ ಅವಕಾಶ ಕೊಡಬೇಡಿ: ಭ್ರಷ್ಟಾಚಾರಕ್ಕೆ ಆಸ್ಪದ ಕೊಡಬೇಡಿ. ಆರ್ಟಿಐ ದುರ್ಬಳಕೆಗೂ ಅವಕಾಶ ಕೊಡಬೇಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ವಿಧಾನಸೌಧದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಸಭೆಯಲ್ಲಿ ಮಾತನಾಡಿದ ಅವರು, ನೀವು ಸರ್ಕಾರದ ಮುಖ. ನಿಮ್ಮ ಕಾರ್ಯವೈಖರಿ ಸರ್ಕಾರದ ಹಣೆಬರಹ ನಿರ್ಧರಿಸುತ್ತದೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ರೆವಿನ್ಯು ಇನ್ಸ್ಪೆಕ್ಟರ್ಗಳು, ಪಿಡಿಒಗಳ ಕಾರ್ಯವೈಖರಿ ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಗಮನ ಹರಿಸಿ ಎಂದು ಹೇಳಿದರು.