ಕರ್ನಾಟಕ

karnataka

ETV Bharat / state

ಇವಿಎಂ ಯಂತ್ರಗಳ ದುರುಪಯೋಗ ಆಗಲ್ಲ.. ಕಾಂಗ್ರೆಸ್ ಮನವಿ ತಿರಸ್ಕಾರ: ಮುಖ್ಯ ಚುನಾವಣಾ ಆಯುಕ್ತರ ಸ್ಟಷ್ಟನೆ - ಕರ್ನಾಟಕ ವಿಧಾನಸಭಾ ಚುನಾವಣೆ

ಗುಜರಾತ್​ನಲ್ಲಿ ಬಳಸಿದ ಇವಿಎಂಗಳನ್ನು ಕರ್ನಾಟಕದಲ್ಲಿ ಬಳಸಬಾರದು ಎಂಬ ಕಾಂಗ್ರೆಸ್ ಮಾಡಿರುವ ಮನವಿ ತಿರಸ್ಕರಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ತಿಳಿಸಿದ್ದಾರೆ.

no-question-of-misuse-of-evm-machines-says-cec-rajiv-kumar
ಇವಿಎಂ ಯಂತ್ರಗಳ ದುರುಪಯೋಗ ಆಗಲ್ಲ... ಕಾಂಗ್ರೆಸ್ ಮನವಿ ತಿರಸ್ಕಾರ: ಮುಖ್ಯ ಚುನಾವಣಾ ಆಯುಕ್ತರ ಸ್ಟಷ್ಟನೆ

By

Published : Mar 11, 2023, 6:48 PM IST

ಬೆಂಗಳೂರು : ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಯಾವುದೇ ಕಡೆ ಅಥವಾ ಯಾರಿಂದಲೂ ದುರುಪಯೋಗ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಇವುಗಳನ್ನು ಬದಲಾವಣೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್​ನಲ್ಲಿ ಬಳಸಿದ ಇವಿಎಂಗಳನ್ನು ಬಳಸಬಾರದು ಎಂಬ ಕಾಂಗ್ರೆಸ್ ಮಾಡಿರುವ ಮನವಿಯನ್ನು ತಿರಸ್ಕರಿಸಲಾಗಿದೆ. ಹಲವು ಸಲ ಇಂತಹ ಪ್ರಶ್ನೆಗಳು ನಮ್ಮುಂದೆ ಬಂದಿವೆ. ಮಹಾರಾಷ್ಟ್ರ, ಗುಜರಾತ್​ನಿಂದ ಕರ್ನಾಟಕಕ್ಕೆ ಬಂದ ಕಾರು ಬೇರೆ ರೀತಿಯಲ್ಲಿ ವರ್ತಿಸುತ್ತಾ?. ಅದೇ ರೀತಿಯಲ್ಲಿ ಯಂತ್ರಗಳ ಬಗ್ಗೆ ಅನುಮಾನಪಡುವ ಅಗತ್ಯವಿಲ್ಲ. ಅಭ್ಯರ್ಥಿಗಳ ಮುಂದೆಯೇ ಅಣಕು ಪ್ರದರ್ಶನ ನಡೆಸುತ್ತೇವೆ. ಯಾವುದೇ ಅನುಮಾನ ಬೇಡ. ಇವಿಎಂ ಯಂತ್ರಗಳನ್ನು ಯಾವುದೇ ಕಡೆಗಳಲ್ಲಾಗಲಿ, ಯಾರಿಂದಲೂ ದುರುಪಯೋಗ ಮಾಡಲು ಸಾಧ್ಯವಿಲ್ಲ ಎಂದರು.

ಕಳೆದ ಮೂರು ದಿನಗಳಿಂದ ರಾಜಕೀಯ ಪಕ್ಷಗಳ ಜೊತೆ ಸಭೆ ಮಾಡಲಾಗಿದ್ದು, ಚುನಾವಣಾ ಆಯುಕ್ತರು, ಡಿಜಿಪಿ, ಪೊಲೀಸ್ ಆಯುಕ್ತರು, ಎಸ್​ಪಿ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ಮಾಡಿ ಚರ್ಚೆ ನಡೆಸಲಾಗಿದೆ. ಮೇ 24 ಕ್ಕೆ ರಾಜ್ಯ ಸರ್ಕಾರದ ಅವಧಿ ಮುಗಿಯಲಿದ್ದು, ಚುನಾವಣಾ ಸಿದ್ಧತೆ ಬಗ್ಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.

ಕಟ್ಟುನಿಟ್ಟಿನ ಕ್ರಮ: ಚುನಾವಣಾ ಅಕ್ರಮದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಡಿಜಿಟಲ್ ಹಣ ವರ್ಗಾವಣೆಯ ಮೇಲೂ ನಿಗಾ ಇಡಲಾಗುವುದು. ಬ್ಯಾಂಕ್​ಗಳಿಗೆ ಹಣ ವರ್ಗಾವಣೆ ಬಗ್ಗೆ ನಿಗಾ ಇಡಲು ಸೂಚಿಸಲಾಗಿದೆ. ಅನುಮಾನಾಸ್ಪದ ಇದ್ದರೆ ಸಂಬಂಧಿಸಿದ ಇಲಾಖೆಗೆ ತಿಳಿಸುವಂತೆ ಸೂಚಿಸಲಾಗಿದೆ. ಅಕ್ರಮ ಕಂಡುಬಂದಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯುಕ್ತರು ತಿಳಿಸಿದರು. ಮುಕ್ತ ಚುನಾವಣಾ ಅನುಮಾನದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೇಂದ್ರ ಚುನಾವಣಾ ಆಯೋಗವು ಇದುವರೆಗೆ ಸುಮಾರು 400 ವಿಧಾನಸಭೆ ಹಾಗೂ 18 ಸಂಸತ್​ ಚುನಾವಣೆಗಳನ್ನು ನಡೆಸಿದೆ. ಆದರೆ, ಯಾವುದೇ ದೂರುಗಳು ಬರದಂತೆ ಪಾರದರ್ಶಕವಾಗಿ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಹಣದ ವಹಿವಾಟಿನ ಮೇಲೆ ತೀವ್ರ ನಿಗಾ: ಹಣದ ಪ್ರಭಾವ ತಡೆಯುವುದು ದೊಡ್ಡ ಸವಾಲಾಗಿದೆ. ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸುಮಾರು ಒಂದು ಸಾವಿರ ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷ ತಡೆಯುವ ನಿಟ್ಟಿನಲ್ಲಿ ಸಂಪೂರ್ಣ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಮತದಾರರಿಗೆ ಆಮಿಷವೊಡ್ಡುವ ಪ್ರಕರಣಗಳಲ್ಲಿ ಈಗಿನಿಂದಲೇ ಕ್ರಮಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಗೃಹ ಉಪಯೋಗಿ ವಸ್ತುಗಳ ಸಾಗಾಟದ ಮೇಲೂ ನಿಗಾ ಇಡಲಾಗುವುದು. ಬ್ಯಾಂಕ್​ ಶಾಖೆಗಳಿಗೆ ಹಾಗೂ ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಸಂಚಾರ ನಡೆಸಲು ಅನುಮತಿ ಇದೆ ಎಂದು ಮಾಹಿತಿ ನೀಡಿದರು.

ಹಣದ ಪ್ರಭಾವ ಬಳಸಿ ನಡೆಸಲಾಗುವ ಚುನಾವಣಾ ಅಕ್ರಮವನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿವೆ. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಿವಿಜಿಲ್‌ ಅಪ್‌ ಮೂಲಕ ಜನ ಸಾಮಾನ್ಯರು ಚುನಾವಣಾ ಅಕ್ರಮವನ್ನು ಅನಾಮಧೇಯವಾಗಿ ದೂರು ನೀಡಬಹುದಾಗಿದೆ ಎಂದರು.

ಶಾಶ್ವತ ಮೂಲ ಸೌಕರ್ಯ: ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ ಮತ್ತು ಅಂಗವಿಕಲರಿಗೆ ಅಗತ್ಯವಾದ ಸೌಲಭ್ಯಗಳನ್ನು ಪ್ರತಿ ಚುನಾವಣೆಯ ಸಂದರ್ಭದಲ್ಲಿ ಅಳವಡಿಸಲಾಗುತ್ತದೆ. ಪ್ರತಿ ಬಾರಿ ತಾತ್ಕಾಲಿಕವಾಗಿ ಈ ಸೌಕರ್ಯಗಳನ್ನು ಅಳವಡಿಸುವ ಚಿಂತನೆಯನ್ನು ಬಿಟ್ಟು, ಶಾಶ್ವತವಾಗಿ ಸೌಕರ್ಯಗಳನ್ನು ಅಳವಡಿಸಲಾಗುವುದು. ಚುನಾವಣಾ ಆಯೋಗದ ವತಿಯಿಂದ ಆಯಾ ಶಾಲೆಗಳಿಗೆ ಇದು ಉಡುಗೊರೆಯಾಗಿರಲಿದೆ ಎಂದು ಹೇಳಿದರು.

ನಗರ ಮತದಾರರ ನಿರಾಸಕ್ತಿ: ನಗರ ಮತದಾರರ ನಿರಾಸಕ್ತಿ ಬಹಳ ದೊಡ್ಡ ಸವಾಲಾಗಿದೆ. 2013ರಲ್ಲಿ ನಡೆದ ಮತದಾನಕ್ಕಿಂತಲೂ ಕಡಿಮೆ ಮತದಾನ 2018ರ ಚುನಾವಣೆಯಲ್ಲಿ ಕಾಣಬಹುದಾಗಿದೆ. ಬೃಹತ್‌ ಬೆಂಗಳೂರು ವ್ಯಾಪ್ತಿಯಲ್ಲಿ ಕಡಿಮೆ ಮತದಾನ ಕಂಡುಬಂದಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಆಯೋಗವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 30 ದಿನಗಳ ಕಾಲ ಎಲೆಕ್ಯಾಥಾನ್‌ ನಡೆಯಲಿದೆ. ವಿಶ್ವ ಮತ್ತು ದೇಶದ ಐಟಿ ಹಬ್‌ ಆಗಿರುವ ಬೆಂಗಳೂರು ಬೇರೆ ರಾಜ್ಯಗಳಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.

ಇದನ್ನೂ ಓದಿ:ರಾಜ್ಯ ವಿಧಾನಸಭಾ ಅವಧಿ ಮೇ 24ಕ್ಕೆ ಅಂತ್ಯ: 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ

ABOUT THE AUTHOR

...view details