ಬೆಂಗಳೂರು: ರಾಜಕಾರಣದಲ್ಲಿ ಯಾರೂ ಸತ್ಯಹರಿಶ್ಚಂದ್ರ ಅಲ್ಲ. ನಳಮಹಾರಾಜನಂತಹ ಸತ್ಯವಂತರು ಇಲ್ಲ. ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ದಾಖಲೆ ಇದೆ. ಇದನ್ನು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವವರಿಗೆ ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕರಿಗೆ ಎಂಟಿಬಿ ನಾಗರಾಜ್ ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಎಂಎಲ್‌ಸಿ ಎಂಟಿಬಿ ನಾಗರಾಜ್ ಟಾಂಗ್ ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೆ ಯಾರು ಏನೇನು ಮಾಡಿದ್ದಾರೆ ಅಂತಾ ಗೊತ್ತಿದೆ. ಹಿಂದಿನ ಮುಖ್ಯಮಂತ್ರಿಗಳ ಸಂದರ್ಭದಲ್ಲಿ ಏನೇನು ಹಗರಣ ಆಗಿದೆ ಅಂತಾ ಜನರಿಗೆ ಗೊತ್ತಿದೆ. ಯಾರು ಸತ್ಯಹರಿಶ್ಚಂದ್ರ ಅಲ್ಲ, ಸತ್ಯವಂತ ಧರ್ಮರಾಯರು, ನಳಮಹಾರಾಜ ನಂತಹ ಸತ್ಯವಂತರು ಯಾರೂ ಇಲ್ಲ. ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲೂ ಭ್ರಷ್ಟಾಚಾರ, ಹಗರಣ ಆಗಿವೆ. ಇದರ ಬಗ್ಗೆ ದಾಖಲೆಗಳು ಕೂಡ ಇವೆ. ಅದನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಯಾರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೋ ಅವರಿಗೆ ಈ ಮಾತು ಹೇಳುತ್ತಿದ್ದೇನೆ. ಪ್ರತಿನಿತ್ಯ ಭ್ರಷ್ಟಾಚಾರದ ಬಗ್ಗೆ ಹೇಳುತ್ತಿದ್ದಾರೆ. ಕೇಳಿದ್ದನ್ನೇ ಎಷ್ಟು ದಿನ ಅಂತಾ ಕೇಳುವುದು ಎಂದು ಕಿಡಿಕಾರಿದರು. ನಾನು 1978 ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಹೊರಗಿನಿಂದ ಬಂದವರು. ನನಗೆ ಟಿಕೇಟ್ ಕೊಟ್ಟವರು ಎಸ್ ಎಂ ಕೃಷ್ಣ. ಕಾಂಗ್ರೆಸ್ನಲ್ಲಿದ್ದಾಗ ಅವರ ನಾಯಕತ್ವದಲ್ಲಿ ಇದ್ದೆವು. ಅವರ ನಾಯಕತ್ವದಲ್ಲಿ ಕೆಲಸ ಮಾಡಿದ್ದೆವು. ಆದರೆ, ನಾನು ಈಗ ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಗೆ ನಿಷ್ಠನಾಗಿ ಇರುತ್ತೇನೆ ಎಂದರು.
ನನಗೆ ವಿಧಾನಪರಿಷತ್ ಸ್ಥಾನ ನೀಡಲಾಗಿದೆ. ಮುಂದೆ ಮಂತ್ರಿ ಸ್ಥಾನದ ಬಗ್ಗೆ ಸಿಎಂ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ. ವಿಧಾನಪರಿಷತ್ ಸ್ಥಾನ ಸಿಕ್ಕಿರುವುದರಿಂದ ತೃಪ್ತಿಯಾಗಿದೆ. ನನಗೆ ಪಕ್ಷದಿಂದ ಯಾವುದೇ ಭರವಸೆ ಕೊಟ್ಟಿಲ್ಲ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರ. ಅವರು ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನನಗೆ ಈಗ ಅವರು ಪರಿಷತ್ ಸ್ಥಾನ ನೀಡುವ ಮೂಲಕ ಅಧಿಕಾರ ಕೊಟ್ಟಿದ್ದಾರೆ. ಅದಕ್ಕೆ ನಾನು ತೃಪ್ತಿಯಾಗಿದ್ದೇನೆ. ನನಗೆ ಆಗಿರುವ ಅನ್ಯಾಯವನ್ನು ಸಿಎಂ ಯಡಿಯೂರಪ್ಪ ಸರಿಪಡಿಸಿದ್ದಾರೆ ಎಂದರು.