ಬೆಂಗಳೂರು : ದೂರು, ಸಲಹೆ ಹಾಗೂ ಅನ್ಯಾಯ ಸೇರಿ ಇನ್ನಿತರ ಮಾಹಿತಿ ನೀಡಲು ಇನ್ನು ಮುಂದೆ ಸಾರ್ವಜನಿಕರು ತುರ್ತು ಸಹಾಯವಾಣಿ 112ಗೆ ಕರೆ ಮಾಡಬೇಕಾದ ಅಗತ್ಯವಿಲ್ಲ. ವಾಟ್ಸಾಪ್ ಮೂಲಕವೂ ಸಹ ದೂರು ಅಥವಾ ವಿಡಿಯೋ ಹಂಚಿಕೊಳ್ಳಲು ಸಾಧ್ಯವಿದೆ. ಅಪರಾಧ ಸೇರಿದಂತೆ ಇನ್ನಿತರ ತುರ್ತು ಮಾಹಿತಿಗಳನ್ನು ತಿಳಿಸಲು ಇಷ್ಟು ವರ್ಷಗಳ ಕಾಲ ನಗರದ ಜನರು 112 ಸಂಖ್ಯೆಗೆ ಕರೆ ಮಾಡುತ್ತಿದ್ದರು. ಸಂಬಂಧಪಟ್ಟ ಪೊಲೀಸರಿಗೆ, ಠಾಣೆಗಳಿಗೆ ಕಂಟ್ರೋಲ್ ರೂಮ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದರು. ಆ ನಂತರವಷ್ಟೇ ಪೊಲೀಸರು ದೂರಿಗೆ ಸ್ಪಂದಿಸುತ್ತಿದ್ದರು.
ನಗರ ಪೊಲೀಸ್ ಆಯುಕ್ತರ ಟ್ವೀಟ್: ಸಾರ್ವಜನಿಕರ ದುಃಖ, ದುಮ್ಮಾನಗಳಿಗೆ ಇನ್ನಷ್ಟು ತ್ವರಿತವಾಗಿ ಸ್ಪಂದಿಸಲು ವಾಟ್ಸಾಪ್ ಮೊರೆ ಹೋಗಿದ್ದು, ಇನ್ನು ಮುಂದೆ 940801000 ಗೆ ಜಸ್ಟ್ ಒಂದು ಕರೆ ಮಾಡಿದರೆ ಸಾಕು ಸಂಬಂಧಪಟ್ಟ ಆಯಾ ವಿಭಾಗದ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಟ್ವೀಟ್ ಮಾಡಿದ್ದಾರೆ. ಹೊಯ್ಸಳ ಸೇರಿದಂತೆ 112 ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ಕೆಲದಿನಗಳ ಹಿಂದಷ್ಟೇ ಖುದ್ದು ಪೊಲೀಸ್ ಆಯುಕ್ತರು ಪರಿಶೀಲಿಸಿದ್ದರು. ಫೀಲ್ಡ್‌ಗಿಳಿದು ಯಾವ ರೀತಿ ಕಾರ್ಯಾಚರಣೆಯಾಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಆಧರಿಸಿ ನೂತನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಸಾಕ್ಷ್ಯಾಧಾರಗಳಿಲ್ಲದೆ ದೂರು ದಾಖಲಿಸುವುದು ವ್ಯಕ್ತಿಯ ಜೀವನ, ಘನತೆ ಉಲ್ಲಂಘಿಸಿದಂತೆ- ಹೈಕೋರ್ಟ್ : ಇನ್ನೊಂದೆಡೆ, ಅಪರಾಧ ಪ್ರಕರಣಗಳಲ್ಲಿ ಆರೋಪಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳಿಲ್ಲದೆ ದೂರು ದಾಖಲಿಸುವ ಹಾಗಿಲ್ಲ. ಒಂದು ವೇಳೆ ದೂರು ದಾಖಲಿಸಿದರೆ ಅದು ಸಂವಿಧಾನದ 21ನೇ ವಿಧಿಯನ್ವಯ ವ್ಯಕ್ತಿಯ ಜೀವನ ಮತ್ತು ಘನತೆಗೆ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಜೂನ್ 13-2023ರಂದು ಅಭಿಪ್ರಾಯಪಟ್ಟಿತ್ತು.