ಕರ್ನಾಟಕ

karnataka

ETV Bharat / state

ಬಿಎಸ್‌ವೈ ಪರಮಾಪ್ತ ಬೊಮ್ಮಾಯಿಗೆ ಪಟ್ಟ.. ದೂರವಾದ ಮಿತ್ರಮಂಡಳಿಯಲ್ಲಿನ ಆತಂಕ.. - anxiety reduced in yadiyurappa close Mlas team

ಈಗಾಗಲೇ ನೂತನ ಸಿಎಂ ಜೊತೆಯಲ್ಲಿ ಸುತ್ತಾಟ ಆರಂಭಿಸಿರುವ ಮಿತ್ರಮಂಡಳಿ ಶಾಸಕರು, ನಿರ್ಗಮಿತ ಸಿಎಂ ಯಡಿಯೂರಪ್ಪ ನಿವಾಸಕ್ಕೂ ಭೇಟಿ ನೀಡುತ್ತಾ ತಮ್ಮ ರಾಜಕೀಯ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದ್ದಾರೆ. ಯಡಿಯೂರಪ್ಪ ಕೂಡ ಪೂರ್ಣಾವಧಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ..

Bommai, BSY and Thavar chand Gehlot
ಬೊಮ್ಮಾಯಿ , ಬಿಎಸ್​ವೈ ಹಾಗೂ ಥಾವರ್​ ಚಂದ್​ ಗೆಹ್ಲೋಟ್​

By

Published : Jul 28, 2021, 3:24 PM IST

ಬೆಂಗಳೂರು :ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಬಾಂಬೆ ಮಿತ್ರಮಂಡಳಿ ಶಾಸಕರಲ್ಲಿನ ಆತಂಕ ದೂರವಾಗಿದೆ. ಯಡಿಯೂರಪ್ಪ ಕೊಟ್ಟ ಮಾತನ್ನು ಬೊಮ್ಮಾಯಿ ಉಳಿಸಿಕೊಂಡು ಹೋಗಲಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ ಬಾಂಬೆ ಫ್ರೆಂಡ್ಸ್‌.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಸಚಿವ ಸಂಪುಟ ವಿಸರ್ಜನೆಯಾಗಿ ಎಲ್ಲ ಸಚಿವರು ಮಾಜಿಗಳಾದರು. ಹೈಕಮಾಂಡ್ ಯಾರನ್ನು ಮುಖ್ಯಮಂತ್ರಿ ಮಾಡಲಿದೆ, ಹೊಸ ಮುಖ್ಯಮಂತ್ರಿ ಸಂಪುಟದಲ್ಲಿ ಯಾರಿಗೆ ಅವಕಾಶ ಸಿಗಲಿದೆಯೋ ನಮ್ಮ ಕಥೆಯೇನು ಎನ್ನುವ ಆತಂಕಕ್ಕೆ ಮಿತ್ರಮಂಡಳಿ ಶಾಸಕರು ಸಿಲುಕಿದ್ದರು.

ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದವರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ 12 ಶಾಸಕರು ಸಚಿವರಾಗಿ ಕೆಲಸ ಮಾಡಿದ್ದರು. ಅವರಲ್ಲಿ ಕೆಲವರನ್ನು ಕೈಬಿಡಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದರಿಂದಾಗಿ ಬಾಂಬೆ ಟೀಂ ಆತಂಕಕ್ಕೆ ಸಿಲುಕಿತ್ತು. ಆದರೆ, ಈಗ ಆ ಆತಂಕ ಕೊಂಚ ಕಡಿಮೆಯಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರ ನಂಬಿಕಸ್ಥ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ ನಮ್ಮನ್ನು ಕೈಬಿಡುವುದಿಲ್ಲ ಎನ್ನುವ ವಿಶ್ವಾಸವನ್ನು ಸುಧಾಕರ್, ಸೋಮಶೇಖರ್ ಸೇರಿದಂತೆ ಮಿತ್ರಮಂಡಳಿ ನಾಯಕರು ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ನಮ್ಮನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದು ಹೇಳಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರು.

ನಾಲಿಗೆ ಮೇಲೆ ನಿಲ್ಲುವ ನಾಯಕ ಯಡಿಯೂರಪ್ಪ, ಅವರ ಉತ್ತರಾಧಿಕಾರಿಯಾಗಿ ಅವರಿಂದಲೇ ಅವಕಾಶ ಪಡೆದ ಬೊಮ್ಮಾಯಿ, ತಮ್ಮ ನಾಯಕ ಕೊಟ್ಟ ಮಾತನ್ನ ಮುರಿಯುವುದಿಲ್ಲ. ನಾವೆಲ್ಲಾ ಹೊಸ ಸಂಪುಟದಲ್ಲಿಯೂ ಸ್ಥಾನ ಪಡೆಯಲಿದ್ದೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಸಚಿವ ಸ್ಥಾನ ಸಿಗಲಿದೆ ಎನ್ನುವ ಅಭಯ : ಈಗಾಗಲೇ ನೂತನ ಸಿಎಂ ಜೊತೆಯಲ್ಲಿ ಸುತ್ತಾಟ ಆರಂಭಿಸಿರುವ ಮಿತ್ರಮಂಡಳಿ ಶಾಸಕರು, ನಿರ್ಗಮಿತ ಸಿಎಂ ಯಡಿಯೂರಪ್ಪ ನಿವಾಸಕ್ಕೂ ಭೇಟಿ ನೀಡುತ್ತಾ ತಮ್ಮ ರಾಜಕೀಯ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದ್ದಾರೆ. ಯಡಿಯೂರಪ್ಪ ಕೂಡ ಪೂರ್ಣಾವಧಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೈಕಮಾಂಡ್​ನಿಂದ ಸರ್ಪೈಸ್ ಸಿಎಂ ಆಯ್ಕೆ ಆದಲ್ಲಿ ತಮ್ಮ ಸ್ಥಾನಗಳ ಕಥೆ ಬಗ್ಗೆ ಆತಂಕಕ್ಕೆ ಸಿಲುಕಿದ್ದ ಮಿತ್ರಮಂಡಳಿ ಶಾಸಕರಲ್ಲಿನ ಆತಂಕ ಕಡಿಮೆಯಾಗಿದೆ. ಯಡಿಯೂರಪ್ಪ ಆಪ್ತರೇ ಸಿಎಂ ಕುರ್ಚಿ ಅಲಂಕರಿಸಿರುವುದರಿಂದ ಬೊಮ್ಮಾಯಿ ಸಂಪುಟದಲ್ಲೂ ಅವಕಾಶ ಸಿಗುವ ವಿಶ್ವಾಸದಲ್ಲಿದ್ದಾರೆ.

ಓದಿ:ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ: ಬೊಮ್ಮಾಯಿ

ABOUT THE AUTHOR

...view details