ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಹೆದ್ದಾರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೆಸರಿಡುವ ಕುರಿತು ಪರಿಶೀಲನೆ ಮಾಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿನಿತ್ ಗಡ್ಕರಿ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಮುಖಂಡ ಟಿ ಎ ಶರವಣ ಹೇಳಿದ್ದಾರೆ. ನಗರದ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಹೆಚ್.ಕೆ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಶರವಣ ನೇತೃತ್ವದ ಜೆಡಿಎಸ್ ನಿಯೋಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಈ ವೇಳೆ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರನ್ನು ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಗೌಡರ ಕೊಡುಗೆ, ಸಾಧನೆಗೆ ಗೌರವ ನೀಡಿ ಈ ಭಾಗದ ಜನತೆಯ ಅಪೇಕ್ಷೆಗೆ ಸ್ಪಂದಿಸುವಂತೆ ಮನವಿ ಮಾಡಿತು. ಜೆಡಿಎಸ್ ನಿಯೋಗದ ಮನವಿ ಆಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಕೇಂದ್ರ ಸಚಿವರ ಭೇಟಿ ನಂತರ ಮಾತನಾಡಿದ ಜೆಡಿಎಸ್ ನಾಯಕ ಶರವಣ, ನಿತಿನ್ ಗಡ್ಕರಿ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡಲು ಮನವಿ ಮಾಡಿದ್ದೇನೆ. ಆ ಭಾಗದ ಜನತೆ ಅಪೇಕ್ಷೆ ಇದೇ ಆಗಿದೆ ಹಾಗಾದಲ್ಲಿ ಗೌಡರ ಸಾಧನೆಗೆ ಗೌರವ ಬರಲಿದೆ ಎಂದು ಮನವಿ ಮಾಡಿದ್ದೇನೆ, ದೆಹಲಿಗೆ ಹೋಗಿ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಸಿಎಂ ಕೂಡ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದಾರೆ. ರಾಷ್ಟ್ರದ ಆಸ್ತಿಯಾದ ಗೌಡರ ಹೆಸರಿಡುವ ಮನವಿಗೆ ಸ್ಪಂದಿಸಿದ್ದಾರೆ. ಬೇಡಿಕೆ ಈಡೇರಿಸುವ ವಿಶ್ವಾಸ ಇದೆ ಎಂದರು.
ದೇವೇಗೌಡರು ಈ ನೆಲದ ಸಾರ್ವಭೌಮ ರಾಜಕಾರಣಿ ಮತ್ತು ಅಜಾತ ಶತ್ರು ಆಗಿದ್ದಾರೆ. ಈ ರಸ್ತೆ ಹಾದು ಹೋಗುವ ಕಡೆ ದೇವೇಗೌಡರ ಶ್ರಮವಿದೆ. ಹಾಗಾಗಿ, ಇದನ್ನು ಮನಗಂಡು ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡುವುದು ಸೂಕ್ತ ಎಂದು ವಿಧಾನಪರಿಷತ್ ಸದಸ್ಯ ಶರವಣ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದರು. ಕನ್ನಡ ನಾಡಿನ ನೆಲ, ಜಲಕ್ಕೆ, ಇಲ್ಲಿನ ಹಕ್ಕುಗಳಿಗೆ ಮತ್ತು ನಾಡಿನ ಅಸ್ಮಿತೆಗೆ ದೇವೇಗೌಡರ ಕೊಡುಗೆ ಅಪಾರವಾಗಿದೆ. ನಾಡಿನ ಜೀವ ನದಿನಗಳಾದ ಕಾವೇರಿ ಹೋರಾಟದಿಂದ ಕೃಷ್ಣ ಹೋರಾಟದವರೆಗೂ ಅವರ ಜನಪರ ಆಂದೋಲನ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಹೇಳಿದ್ದರು.