ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರ ಪರ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮುನಿರತ್ನ ನಿರ್ಮಾಪಕರು, ನಾನೊಬ್ಬ ನಟ ಅಷ್ಟೇ. ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ನನ್ನ ಹಾಗೂ ಮುನಿರತ್ನ ನಡುವಿನ ಸಂಬಂಧ ಸಿನಿಮಾಗೆ ಮಾತ್ರ ಸೀಮಿತ ಎಂದು ಹೇಳಿದರು.
ನಿಖಿಲ್ ಕುಮಾರಸ್ವಾಮಿ ರೋಡ್ ಶೋ ಮುನಿರತ್ನ ಸಿನಿಮಾ ಗಾಡ್ ಫಾದರ್ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ್ ಸರ್ ಗಾಡ್ ಫಾದರ್?. ಇದು ತಪ್ಪು ಸಂದೇಶ. ಚಿತ್ರರಂಗದಲ್ಲಿ ಮುನಿರತ್ನ ಹಾಗು ನನ್ನ ಸಂಬಂಧ ಚಿತ್ರರಂಗಕ್ಕೆ ಮಾತ್ರ ಸೀಮಿತ. ಅವರು ನಿರ್ಮಾಪಕರು, ನಾನು ನಟ ಎಂದರು.
ವಿ.ಕೃಷ್ಣಮೂರ್ತಿಯವರ ತಂದೆ ವೆಂಕಟೇಶ್ ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡಿದ್ದೇವೆ. ರಾಷ್ಟ್ರೀಯ ಪಕ್ಷಗಳ ರೇಸ್‌ನಲ್ಲಿ ನಾವಿಲ್ಲ ಎಂಬ ಸುದ್ದಿಯಾಗಿದೆ. ನಾವು ರೇಸ್‌ನಲ್ಲಿ ಇದೀವಿ. ಆರ್. ಆರ್.ನಗರ ಜನತೆ ನಮ್ಮನ್ನು ಕೈಬಿಡಲ್ಲ ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಜಾತಿ ಕಾರ್ಡ್ ಬಗ್ಗೆ ಮಾತನಾಡುತ್ತಾ, ಈಗ ಒಕ್ಕಲಿಗ ಜಾತಿಯನ್ನು ಚುನಾವಣೆಯಲ್ಲಿ ತಂದಿರುವ ಕಾಂಗ್ರೆಸ್‌ನವರೇ ಮುನಿರತ್ನ ಅವರನ್ನು ಈ ಹಿಂದೆ ಎರಡು ಬಾರಿ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಆಗ ಇರದ ಜಾತಿ ಮೇಲಿನ ಪ್ರೀತಿ, ಅವರಿಗೆ ಈಗ ಬಂದಿದೆ. ನಮ್ಮ ಅಭ್ಯರ್ಥಿಯೂ ಒಕ್ಕಲಿಗ ಜಾತಿಗೆ ಸೇರಿದವರು ಎಂದು ಹೇಳಿದರು.