ಬೆಂಗಳೂರು: ಹಗಲಿನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿ ಕತ್ತಲಾಗುತ್ತಿದ್ದಂತೆ ಕಳ್ಳತನ ಮಾಡುತ್ತಿದ್ದ ನೇಪಾಳಿ ಗ್ಯಾಂಗ್ನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ರಾಜೇಶ್ ಖಡಕ, ಸಚಿನ್ ಕುಮಾರ್, ಮುಖೇಖ್ ಖಡಕ, ಕರಣ್ ಖಡಕ, ರಾಜು ಸಿಂಗ್, ಎಗ್ಗಿರಾಜ್ ಖಡಕ್ ಬಂಧಿತ ಆರೋಪಿಗಳು. ಇವರೆಲ್ಲರೂ ನೇಪಾಳಿ ಮೂಲದವರಾಗಿದ್ದಾರೆ. ಎರಡು-ಮೂರು ವರ್ಷಗಳ ಹಿಂದೆ ನೇಪಾಳದಿಂದ ಬೆಂಗಳೂರಿಗೆ ಬಂದು ನಗರದ ನಾನಾ ಕಡೆಗಳಲ್ಲಿ ಅಪಾರ್ಟ್ಮೆಂಟ್ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದರು. ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ಹಿಡಿದಿದ್ದರು.
ನೇಪಾಳಿ ಗ್ಯಾಂಗ್ ಬಂಧನ ಕುರಿತು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಮಾತನಾಡಿದ್ದಾರೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕರಣ್, ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ. ಲಾಕ್ಡೌನ್ ಹಿನ್ನೆಲೆ ಅಶೋಕ ರೆಡ್ಡಿ ಎಂಬುವವರು ಕುಟುಂಬ ಸಮೇತ ಊರಿಗೆ ಹೋಗಿದ್ದರು. ಇದನ್ನರಿತ ಕರಣ್, ಮನೆ ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಇನ್ಸ್ಪೆಕ್ಟರ್ ಮೆಲ್ವಿನ್ ಫ್ರಾನ್ಸಿಸ್ಸ್ ಪ್ರಕರಣ ದಾಖಲಿಸಿಕೊಂಡಿದ್ದರು.
ಕಳ್ಳತನ ಕೃತ್ಯ ಎಸಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿ ಚಹರೆ ಮೇರೆಗೆ ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಮೇರೆಗೆ ಮತ್ತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ರಾಮಮೂರ್ತಿನಗರ ಹಾಗೂ ಆರ್.ಆರ್. ನಗರದಲ್ಲಿ ನಡೆದಿದ್ದ ಆರು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದಂತಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. ಬಂಧಿತರಿಂದ ಸುಮಾರು 17 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಓದಿ:ಜನರ ಜೀವದ ಜತೆ ಚೆಲ್ಲಾಟ ಬೇಡ, ಅಧಿಕಾರ ಬಿಟ್ಟು ನಡೆಯಿರಿ: ಡಿ.ಕೆ ಶಿವಕುಮಾರ್ ಗುಡುಗು