ಬೆಂಗಳೂರು:ಎಲ್ಲ ಉಪಖನಿಜ ಮತ್ತು ಮುಖ್ಯ ಖನಿಜ ಸಾಗಣೆ ಮಾಡುವ ಲಾರಿ, ಟಿಪ್ಪರ್ ಗಳನ್ನು ಒನ್ ಸ್ಟೇಟ್ ಒನ್ ಜಿಪಿಎಸ್ ವ್ಯವಸ್ಥೆಗೆ ಒಳಪಡಿಸುವದರಿಂದ ಅಕ್ರಮ ಸಾಗಣೆ ಹಾಗೂ ಸೋರಿಕೆ ತಡೆಗಟ್ಟುವುದರೊಂದಿಗೆ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ನಗರದ ಖನಿಜ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಒನ್ ಸ್ಟೇಟ್ ಒನ್ ಜಿಪಿಎಸ್ ಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಹೊಸ ಬದಲಾವಣೆಯೊಂದಿಗೆ ಸಾಗುವುದು ಅತ್ಯಂತ ಅಗತ್ಯವಾಗಿದೆ. ಖನಿಜ ಸಾಗಣೆ ವಾಹನಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಸೋರಿಕೆ ತಡೆಗಟ್ಟಲು ಅಧಿಕಾರಿಗಳು ಕಣ್ಗಾವಲು ಹಾಕಬೇಕು ಎಂದು ಸೂಚಿಸಿದರು.
ಗಣಿ ಗುತ್ತಿಗೆ ಪ್ರದೇಶದಿಂದ ಅಗತ್ಯ ಸ್ಥಳ ತಲುಪಿರುವುದನ್ನು ತಂತ್ರಾಂಶದಿಂದ ಖಾತರಿಪಡಿಸಿಕೊಳ್ಳಬಹುದು. ಗುತ್ತಿಗೆ ಪ್ರದೇಶ ಹೊರತುಪಡಿಸಿ ಇತರೆ ಪ್ರದೇಶಗಳಿಂದ ಖನಿಜ ಸಾಗಾಣಿಕೆ ಮಾಡುವ ವಾಹನಗಳ ಚಲನವಲನಗಳ ಬಗ್ಗೆ ನಿಗಾವಹಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಅನಧಿಕೃತ ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸಲು ಮತ್ತು ಅಕ್ರಮ ಸಾಗಾಣಿಕೆ ನಿಯಂತ್ರಿಸಲು, ಖನಿಜ ಸಾಗಾಣಿಕೆ ಪರವಾನಿಗೆಗಳನ್ನು ಮರು ಬಳಕೆ ಮೇಲೆ ನಿಗಾವಹಿಸಲು ಸಹಕಾರಿಯಾಗಲಿದೆ ಎಂದರು.
ವಾರ್ಷಿಕ ವೆಚ್ಚ ಲಾರಿ ಮಾಲೀಕರು ಭರಿಸಬೇಕು: ಒಂದು ಬಾರಿಗೆ ವಾಹನ ನೋಂದಣಿ ಶುಲ್ಕ ಪಡೆಯಲು ತಂತ್ರಾಂಶ ಅಭಿವೃದ್ಧಿಪಡಿಸುವ, ವಾರ್ಷಿಕ ನಿರ್ವಹಣೆ, ಮಾನವ ಸಂಪನ್ಮೂಲ, ಇತರೆ ವಿಷಯಗಳನ್ನು ಒಳಗೂಂಡ ವಾರ್ಷಿಕ ವೆಚ್ಚವನ್ನು ಲಾರಿ ಮಾಲೀಕರಿಂದ ಭರಿಸಲು ತೀರ್ಮಾನಿಸಲಾಗಿದೆ. ವಾಹನಗಳ ನೋಂದಣಿ ಸಮಯದಲ್ಲಿ ಒಂದು ಬಾರಿಗೆ 100 ರೂ ನೋಂದಣಿ ಶುಲ್ಕ, 500 ರೂ ವಾರ್ಷಿಕ ನಿರ್ವಹಣೆ ವೆಚ್ಚವನ್ನು ವಾಹನ ಮಾಲೀಕರು ಪಾವತಿಸಬೇಕು. ಈ ಸಂಬಂಧ ಎಲ್ಲಾ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಲಾಗಿದೆ ಎಂದರು.