ಆನೇಕಲ್ ( ಬೆಂಗಳೂರು): "ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರ ಜಾಮೀನು ಆದೇಶದ ಪ್ರತಿ ಸರಿಯಾದ ಸಮಯಕ್ಕೆ ಜೈಲನ್ನು ತಲುಪಿದೆ. ಆದರೆ ಕಾರಾಗೃಹದಲ್ಲಿ ಆದೇಶದ ಪ್ರತಿ ಸರಿಯಾದ ಸಮಯಕ್ಕೆ ಬಂದಿಲ್ಲ ಅಂತಿದ್ದಾರೆ. ಕಾರಾಗೃಹದಲ್ಲಿ ಇರುವಂತಹ ಕಾನೂನು ಪ್ರಕ್ರಿಯೆ ಏನು ಎಂಬುದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಇಮೇಲ್ ಮುಖಾಂತರ 6.45ರ ಹೊತ್ತಿಗೆ ಆದೇಶದ ಪ್ರತಿ ಕೇಂದ್ರ ಕಾರಾಗೃಹಕ್ಕೆ ತಲುಪಿದೆ. ಆದರೆ ಜೈಲಿನ ಅಧಿಕಾರಿಗಳು ನಾವು ಚರ್ಚೆ ಮಾಡುತ್ತಿದ್ದೇವೆ. ನಮಗೆ ಸಮಯ ಇದೆ ಯಾವಾಗ ಬೇಕಾದರೂ ಅವರನ್ನು ಬಿಡುಗಡೆ ಮಾಡಬಹುದು ಎನ್ನುತ್ತಿದ್ದಾರೆ" ಎಂದು ನಾರಾಯಣ ಗೌಡ ಪರ ವಕೀಲ ಕುಮಾರ್ ಹೇಳಿದ್ದಾರೆ.
ವಕೀಲ ಕುಮಾರ್ ಅವರು ಸೋಮವಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, "ಇದುವರೆಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಕೂಡ ಪೊಲೀಸರು ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ಬಾಡಿ ವಾರೆಂಟ್ ತೆಗೆದುಕೊಂಡಿಲ್ಲ. ಹಾಗಾಗಿ ಬಾಡಿ ವಾರೆಂಟ್ ಇಲ್ಲದೆ ಅವರನ್ನು ಒಳಗಡೆ ಇರಿಸಿಕೊಳ್ಳುವ ಅಧಿಕಾರ ಅವರಿಗಿಲ್ಲ. ಇಲ್ಲಿಯವರೆಗೆ ನಾರಾಯಣ ಗೌಡ ಸೇರಿ ಇತರ ಬಂಧಿತ ಕನ್ನಡಪರ ಕಾರ್ಯಕರ್ತರ ಮೇಲೂ ಯಾವುದೇ ಬಾಡಿ ವಾರೆಂಟ್ ಆಗಿಲ್ಲ. ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ, ಜಾಮೀನು ಅಪರಾಧ ಆಗಿರುವುದರಿಂದ ಗೌಡ್ರು ಸೇರಿ ಎಲ್ಲಾ ಕಾರ್ಯಕರ್ತರು ಹೊರಗಡೆ ಬರುತ್ತಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪಿಡಿಪಿಎ ಕಾಯ್ದೆಯ 2a, 2b ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅದು ಜಾಮೀನು ನೀಡದ ಪ್ರಕರಣವಾಗಿದೆ. ಆದ್ದರಿಂದ ಅದರಲ್ಲಿ ಸ್ವಲ್ಪ ನಮಗೆ ತೊಂದರೆ ಆಗುವ ಸಾಧ್ಯತೆ ಇದೆ." ಎಂದು ತಿಳಿಸಿದರು.