ಅಮೂಲ್ ಜೊತೆ ಕೆಎಂಎಫ್ ವಿಲೀನ ಪ್ರಸ್ತಾಪವೇ ಇಲ್ಲ. ಬೆಂಗಳೂರು : ನಮಗೆ ನಂದಿನಿ ಹೇಗೆ ಮುಖ್ಯವೋ ಹಾಗೆಯೇ ಗೋವು ಕೂಡ ಮುಖ್ಯ. ಆದರೆ ಪ್ರತಿಪಕ್ಷಗಳು ಗೋವು ಬೇಡ ನಂದಿನಿ ಮಾತ್ರ ಬೇಕು ಅನ್ನುತ್ತಿದ್ದಾರೆ. ನಮಗೆ ಎರಡೂ ಮುಖ್ಯ ಎನ್ನುವ ಕಾರಣಕ್ಕೆ ನಾವು ಗೋವು ರಕ್ಷಣೆಗೆ ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇವೆ. ಕಾಯ್ದೆ ವಿರುದ್ಧ ಮತ ಹಾಕಿದವರು ನೀವು. ಆದರೂ ಸಹಾ ನಂದಿನಿಯನ್ನು ದೇಶದ ದೊಡ್ಡ ಹೈನುಗಾರಿಕಾ ಸಂಸ್ಥೆಯಾಗಿ ಮಾಡುತ್ತೇವೆ ಎಂದು ಪ್ರತಿಪಕ್ಷಗಳಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸವಾಲೆಸೆದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್, ದೇಶದಲ್ಲಿ ಅಮೂಲ್‍ಗೆ ಸ್ಪರ್ಧೆ ಒಡ್ಡುವ ಮಾದರಿಯಲ್ಲಿ ಕೆಎಂಎಫ್ (ನಂದಿನಿ) ಸಂಸ್ಥೆಯನ್ನು ಬೆಳೆಸುತ್ತೇವೆ. ನಂದಿನಿ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಆಧಾರರಹಿತ ಮತ್ತು ಅವರದು ರೋಗಿಷ್ಠ ಮನಸ್ಥಿತಿಯಾಗಿದೆ. ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ನಂದಿನಿ ಮುಳುಗಿಸುವ ಟೀಕೆ ಮಾಡುತ್ತಿದ್ದು, ನಂದಿನಿ ಮಾತ್ರವಲ್ಲದೆ ರಾಜ್ಯದ ಹಸುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ಎಂದರು.
ವಿಶ್ವದಲ್ಲಿ ಭಾರತ ಮೊದಲು ಎಂಬ ತತ್ವ ನಮ್ಮದು. ಆದರೆ ಭಾರತದಲ್ಲಿ ಕಾಂಗ್ರೆಸ್ ಮೊದಲು, ಕಾಂಗ್ರೆಸ್‍ನಲ್ಲಿ ಸೋನಿಯಾ - ರಾಹುಲ್ ಗಾಂಧಿ ಮೊದಲು ಎನ್ನುವ ಚಿಂತನೆ ಕಾಂಗ್ರೆಸ್ಸಿಗರು. ಜೆಡಿಎಸ್ ಕೂಡ ಕುಟುಂಬ ಮೊದಲು ಎಂಬ ನೀತಿ ಹೊಂದಿದೆ. ಭಯೋತ್ಪಾದನೆ, ನಕ್ಸಲಿಸಂ ನಿರ್ಮೂಲನೆ ಮಾಡಿದ್ದು ಮೋದಿಜಿ, ಬೊಮ್ಮಾಯಿ ಸರಕಾರ ಎಂದು ಹೇಳಿದರು. ಪಿಎಫ್‍ಐ ಬ್ಯಾನ್ ಮಾಡಿದವರು ನಾವು. ಅವರ ವಿರುದ್ಧ ಇದ್ದ ಪ್ರಕರಣಗಳನ್ನು ರದ್ದು ಮಾಡಿದ್ದು ನೀವು. 370 ನೇ ವಿಧಿ ರದ್ದು ಮಾಡಿದ್ದು ನಾವು ಇದು ನಿಮಗೆ ಅರಿವಿಲ್ಲವೇ ಎಂದು ಕಿಡಿಕಾರಿದರು.
ಪ್ರಧಾನಿಗೆ ಅಭಿನಂದನೆ:ಹುಲಿ ರಕ್ಷಣೆ, ಪೋಷಣೆ, ಗಣಕೀಕರಣಕ್ಕೆ ಸಂಬಂಧಿಸಿ ರಾಜ್ಯದ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಸಂತೋಷಕರ. 1970-75ರ ದಶಕದಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಆಗುತ್ತಿತ್ತು. ಈ ಕಾರಣ ಹುಲಿ ರಕ್ಷಣೆ, ಪೋಷಣೆಗಾಗಿ ಬಂಡೀಪುರ, ಮಧ್ಯಪ್ರದೇಶದಲ್ಲಿ ಒಂದು ಯೋಜನೆ ಜಾರಿ ಮಾಡಲಾಗಿತ್ತು. ಹುಲಿ ರಕ್ಷಣೆ, ಸಂಖ್ಯೆ ವೃದ್ಧಿಯಲ್ಲಿ ಕರ್ನಾಟಕ ಈಗ ನಂಬರ್ 2ನೇ ಸ್ಥಾನದಲ್ಲಿದೆ. ಪ್ರಧಾನಿಯವರ ಕಾಳಜಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಿದರು.
ಕೆಎಂಎಫ್ ವಿಲೀನ ಪ್ರಸ್ತಾಪವೇ ಇಲ್ಲ-ಎಸ್.ಟಿ. ಸೋಮಶೇಖರ್: ಇದೇ ವೇಳೆ ಮಾತನಾಡಿದ ರಾಜ್ಯದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ನಂದಿನಿ ಬ್ರ್ಯಾಂಡ್ ಅಳಿಸಲು ಅಸಾಧ್ಯ. ಸರ್ಕಾರದಿಂದ ಗರಿಷ್ಠ ಸಹಕಾರ ನೀಡಲಾಗುತ್ತಿದ್ದು, ಗುಜರಾತ್ ಮಾದರಿ ಅನುಸರಿಸಿದರೆ ಇನ್ನಷ್ಟು ಬೆಳೆಸಲು ಸಾಧ್ಯ ಎಂಬ ಚಿಂತನೆ ಇದೆಯೇ ಹೊರತು ಅಮೂಲ್ ಜೊತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವ ಕೆಎಂಎಫ್ ವಿಲೀನ ಪ್ರಸ್ತಾಪವೇ ಇಲ್ಲ ಎಂದು ತಿಳಿಸಿದರು.
ನಂದಿನಿ ಕೌಂಟರ್ಗಳು ರಾಜ್ಯದಲ್ಲಿ ಲಕ್ಷಾಂತರ ಇದ್ದು, ಆನ್‍ಲೈನ್ ವ್ಯವಸ್ಥೆ ಈಗಲೂ ಇದೆ. ಈಗ ಬೀಸಿಗೆ ಕಾಲವಾಗಿರುವುದರಿಂದ ಹಾಲು ಉತ್ಪಾದನೆ ಕಡಿಮೆ ವಾಗಿದೆ. ಅಷ್ಟಕ್ಕೇ ಕೃತಕ ಅಭಾವ ಸೃಷ್ಟಿ ಎನ್ನುವುದು ನಿರಾಧಾರ ಆರೋಪ. ಕರ್ನಾಟಕದಲ್ಲಿ 15 ಮಿಲ್ಕ್ ಯೂನಿಯನ್‍ಗಳಿವೆ. ಎಲ್ಲವೂ ಲಾಭದಲ್ಲಿವೆ. ಕೋವಿಡ್ ವೇಳೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಿಗತೆ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡಲು ಏರ್ಪಾಡು ಮಾಡಲಾಗಿತ್ತು. ಅದಕ್ಕೆ ಬೇಕಾದ ಹಣವನ್ನು ಕೆಎಂಎಫ್‍ಗೆ ಕೊಡಲಾಗಿತ್ತು. ಮಿಗತೆ ಹಾಲು ಉಚಿತವಾಗಿ ಕೊಡಲು ಆದೇಶ ಮಾಡಿ ಕೆಎಂಎಫ್ ನೆರವಿಗೆ ಬರಲಾಗಿತ್ತು ಎಂದು ವಿವರಿಸಿದರು.
ಕಳೆದ ವರ್ಷ ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆಯಲ್ಲಿ ಕೇಂದ್ರದ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ನಂದಿನಿ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ನೆರವು ಪಡೆಯಲು ಅಮೂಲ್ ಜೊತೆ ಚರ್ಚಿಸಿ ತಿಳಿಸಿದ್ದಾಗಿ ವಿವರಿಸಿದರು. ನಂದಿನಿ ಸೊಸೈಟಿಗಳು 25- 26 ಲಕ್ಷ ರೈತರಿಂದ ಹಾಲು ಖರೀದಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ನಂದಿನಿ ಉತ್ಪನ್ನವನ್ನೇ ಖರೀದಿ ಮಾಡುತ್ತಾರೆ. ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಭದ್ರವಾಗಿ ಬೆಳೆದಿವೆ. ಯಾರೇ ಸ್ಪರ್ಧೆ ಮಾಡಿದರೂ ಸಮರ್ಥ ಕೆಎಂಎಫ್ ಫೆಡರೇಷನ್ ಮಿಲ್ಕ್ ಯೂನಿಯನ್‍ಗಳ ಜೊತೆ ಸ್ಪರ್ಧೆ ಮಾಡಿ ಗೆಲ್ಲಲು ಅಸಾಧ್ಯ ಎಂದು ಹೇಳಿದರು.
ಅಶ್ವತ್ಥ ನಾರಾಯಣ್ ಪ್ರತಿಕ್ರಿಯೆ: ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್ ಮಾತನಾಡಿ, ಕೆ.ಎಂ.ಎಫ್ ಸರಿಸುಮಾರು 20 ರಿಂದ 22 ಸಾವಿರ ಕೋಟಿ ವಹಿವಾಟು ನಡೆಸುತ್ತದೆ. ಸಹಕಾರಿ ಇಲಾಖೆ ಒಪ್ಪಿಗೆ ಇಲ್ಲದೆ, ಮಾತುಕತೆ ಇಲ್ಲದೆ ಇನ್ನೊಂದು ರಾಜ್ಯದ ಸಂಸ್ಥೆ ಜೊತೆ ವಿಲೀನ ಅಸಾಧ್ಯ. ಜೊತೆಗೆ ಮಹಾಸಭೆಯ ಒಪ್ಪಿಗೆ, ಕ್ಯಾಬಿನೆಟ್ ಒಪ್ಪಿಗೆ ಬೇಕು. ಬೆಳವಣಿಗೆಗಾಗಿ ತಂತ್ರಜ್ಞಾನದ ಸಹಕಾರ ಸ್ವಾಗತಾರ್ಹವಾಗಿದ್ದು, ಕೆಎಂಎಫ್ ಉತ್ಪನ್ನಗಳು ದೇಶದ 12 ರಾಜ್ಯಗಳಲ್ಲಿ ಮಾರಾಟ ಆಗುತ್ತಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ. ಆದರೇ ಕನ್ನಡ- ಮಾರವಾಡಿಗಳು ಎಂದು ಶಬ್ದ ಬಳಸಿದ ಮಾಜಿ ಸಿಎಂಗಳಾದ ಕಾಂಗ್ರೆಸ್ಸಿನ ಸಿದ್ದರಾಮಯ್ಯ, ಜೆಡಿಎಸ್‍ನ ಕುಮಾರಸ್ವಾಮಿ ಅವರು ಜವಾಬ್ದಾರಿ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಹಾಸನ ಟಿಕೆಟ್ ಗೊಂದಲ ಮುಚ್ಚಿಹಾಕಲು ಹೆಚ್.ಡಿ ಕುಮಾರಸ್ವಾಮಿ ಅಮುಲ್- ನಂದಿನಿ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಸಾಮಾನ್ಯ ಜ್ಞಾನದ ಕೊರತೆ ಇದರಲ್ಲಿದೆ. ತಂತ್ರಜ್ಞಾನ ಹಂಚಿಕೆ, ಮಾರುಕಟ್ಟೆ ವಿಸ್ತರಣೆಗೆ ಸಲಹೆ ಪಡೆಯುವುದು ಸಹಜ ಪ್ರಕ್ರಿಯೆ. ಐಟಿಐ, ಎನ್‍ಜಿಇಎಫ್ ಸೇರಿದಂತೆ ಹಲವು ಸಂಸ್ಥೆಗಳು ಮುಚ್ಚಿಹೋಗಿವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಇದು ಜವಾಬ್ದಾರಿ ಇಲ್ಲದ ಹೇಳಿಕೆಗಳು ಎಂದು ಆರೋಪಿಸಿ ಸಂಜೆ ವೇಳೆ ಹೇಳಿಕೆ ಕೊಡದೆ, ಬೆಳಿಗ್ಗೆ ಹೇಳಿಕೆ ಕೊಟ್ಟರೆ ಸರಿ ಇರುತ್ತದೆ. ಸಾಮಾನ್ಯ ಜ್ಞಾನದೊಂದಿಗೆ ಮಾತನಾಡಿ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ :ನಂದಿನಿ ಹಾಲನ್ನೇ ಬಳಸಲು ನಿರ್ಧರಿಸಿದ ಬೆಂಗಳೂರು ಹೊಟೇಲ್ ಸಂಘ