ಬೆಂಗಳೂರು:ಯಾವುದೇ ಕೋರಿಕೆ ಇಲ್ಲದೆ, ಮಾಹಿತಿ ನೀಡದೇ ನಗರದ ಮೂರು ಲೋಕಸಭಾ ಕ್ಷೇತ್ರದಲ್ಲಿ ತಲಾ 60 ಸಾವಿರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದ್ದು, ಇದರ ಹಿಂದೆ ಮಹಾನಗರ ಪಾಲಿಕೆಯ ಕೈವಾಡವಿದೆ. ಈ ಕುರಿತು ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ನಗರದ ಉತ್ತರ, ದಕ್ಷಿಣ ಹಾಗು ಕೇಂದ್ರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ತಲಾ 60 ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ. ಕೆಲವು ಕಡೆ ಪತ್ನಿ ಹೆಸರು ಮಾಯವಾದರೆ, ಇನ್ನೂ ಕೆಲವೆಡೆ ಪತಿಯ ಹೆಸರು ಮತಪಟ್ಟಿಯಲ್ಲಿ ಇರಲಿಲ್ಲ. ಅಮೆರಿಕಾದಿಂದ ಮತ ಚಲಾಯಿಸಲು ಬಂದವರ ಹೆಸರು ಕೂಡ ಪಟ್ಟಿಯಿಂದ ಕಾಣೆಯಾಗಿದೆ. ಅಷ್ಟು ದೂರದಿಂದ ಮತ ಹಾಕಲು ಬಂದವರಿಗೆ ವೋಟ್ ಇಲ್ಲ ಎಂದರೆ ಹೇಗೆ? ಮಣಿಪಾಲದಿಂದ ಮತ ಹಾಕುವುದಕ್ಕೆ ಬಂದವರ ಹೆಸರೂ ಡಿಲೀಟ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿರುವ ಮಾಜಿ ಡಿಸಿಎಂ ಆರ್ ಅಶೋಕ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರ ಹೆಸರುಗಳೂ ಈ ಬಾರಿ ಡಿಲೀಟ್ ಆಗಿವೆ. ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಕಾರ್ಪೋರೇಶನ್ ಕಾರಣ. ಒಂದೊಂದು ಕ್ಷೇತ್ರದಲ್ಲಿ ಐವತ್ತು-ಅರವತ್ತು ಸಾವಿರ ಮತದಾರರ ಹೆಸರುಗಳಿಲ್ಲ. ಇದರ ವಿರುದ್ಧ ನಾವು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸುವ ಬಗ್ಗೆ ಎಲ್ಲಾ ರೀತಿಯ ದಾಖಲೆಗಳನ್ನ ಸಂಗ್ರಹ ಮಾಡುತ್ತಿದ್ದೇವೆ ಎಂದರು.
ಮೊದಲ ಹಂತದ ಚುನಾವಣೆಯಲ್ಲಿ ಕನಿಷ್ಟ 10 ಕ್ಷೇತ್ರಗಳನ್ನ ಗೆಲ್ಲುತ್ತೇವೆ:
ಮೊದಲ ಹಂತದ ಚುನಾವಣೆಯಲ್ಲಿ ಕನಿಷ್ಟ 10 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಈ ಬಾರಿ ವಾತಾವರಣ ಬಿಜೆಪಿ ಪರ ಇದೆ. ಬೆಂಗಳೂರಿನ ನಾಲ್ಕು ಕ್ಷೇತ್ರಗಳನ್ನೂ ಪಕ್ಷ ಗೆಲ್ಲುತ್ತದೆ. ಎರಡನೇ ಹಂತದ ಚುನಾವಣೆಯಲ್ಲಿಯೂ ನಮಗೆ 10 ಸ್ಥಾನ ಖಚಿತ. ರಾಜ್ಯದೆಲ್ಲೆಡೆ ಕನಿಷ್ಠ 22 ಸ್ಥಾನ ಗೆಲ್ಲುವ ಗುರಿ ತಲುಪಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ನಾವು ಟೈಂ ಬಾಂಬ್ ಫಿಕ್ಸ್ ಮಾಡಿಲ್ಲ:
ನಾವು ಮೈತ್ರಿ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿಲ್ಲ. ಅದೆಲ್ಲಾ ಮಾಜಿ ಸಿಎಂ ಸಿದ್ದರಾಮಯ್ಯನವರ ಕೆಲಸ. ಅವರು ಯಾವಾಗ ಬಯಸುತ್ತಾರೋ ಆಗ ಮೈತ್ರಿ ಸರ್ಕಾರ ಪತನ ಆಗುತ್ತದೆ. ಮೈತ್ರಿ ಸರ್ಕಾರ ಬೀಳಿಸಲು ನಾವು ಯಾವುದೇ ಮುಹೂರ್ತ ಫಿಕ್ಸ್ ಮಾಡಿಲ್ಲ. ಆದರೆ, ಸರ್ಕಾರ ಅವರ ಕಚ್ಚಾಟದಿಂದಲೇ ಪತನಗೊಳ್ಳಲಿದೆ ಎಂದರು.
ಕೈಕೊಟ್ಟ ಕರೆಂಟ್:
ಮಾಜಿ ಡಿಸಿಎಂ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವಿದ್ಯುತ್ ಪದೇ ಪದೇ ಕೈಕೊಟ್ಟು ಕಣ್ಣಾಮುಚ್ಚಾಲೆ ಆಡಿತು. ಸುದ್ದಿಗೋಷ್ಠಿ ಆರಂಭಗೊಂಡ ಕೆಲ ಹೊತ್ತಿನಲ್ಲೇ ವಿದ್ಯುತ್ ಕೈಕೊಟ್ಟರೆ, ವಿದ್ಯುತ್ ಬರುತ್ತಿದ್ದಂತೆ ಮಾತು ಮುಂದುವರೆಸಿದರು. ಅದಾದ ಕೆಲ ಸಮುಯದ ನಂತರ ಮತ್ತೊಮ್ಮೆ ವಿದ್ಯುತ್ ಹೋಗಿ ಕತ್ತಲೆ ಆವರಿಸಿತು. ಆಗ ಸರ್ಕಾರದ ಕಾಲೆಳೆದ ಅಶೋಕ್, ಇದು ಸರ್ಕಾರದ ತೊಂದರೆ. ಪದೇ ಪದೇ ವಿದ್ಯುತ್ ಕೈ ಕೊಡುತ್ತಿರುವುದನ್ನು ನೋಡಿದರೆ ಸರ್ಕಾರಕ್ಕೆ ಸಮಸ್ಯೆ ಇದೆ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.