ಯಡಿಯೂರಪ್ಪನವರ ನಿವಾಸದ ಮೇಲೆ ದಾಳಿ ಹಿಂದೆ ಕಾಂಗ್ರೆಸ್ ಪಿತೂರಿಯಿದೆ: ನಳಿನ್ ಕುಮಾರ್ ಕಟೀಲ್ ಬೆಂಗಳೂರು/ ಚಿಕ್ಕೋಡಿ:ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ಘಟನೆ ಖಂಡನೀಯವಾಗಿದ್ದು, ಇದರ ಹಿಂದೆ ಕಾಂಗ್ರೆಸ್ನ ಪಿತೂರಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯನ್ನು ಖಂಡಿಸುತ್ತೇನೆ. ಇದೊಂದು ರಾಜಕೀಯ ಪ್ರೇರಿತ ವಿದ್ಯಮಾನವಾಗಿದೆ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಬಹಳ ವರ್ಷಗಳ ಒಳಮೀಸಲಾತಿ ಬೇಡಿಕೆ ಇದೆ. ಇದನ್ನು ಬೊಮ್ಮಾಯಿ ಸರ್ಕಾರ ಮಾಡಿದೆ. ಎಲ್ಲ ಸಮುದಾಯದ ಪರವೂ ನಮ್ಮ ಸರ್ಕಾರವಿದೆ. ಎಲ್ಲೂ ಗೊಂದಲವಾಗಿಲ್ಲ. ಆದರೆ ಶಿಕಾರಿಪುರದಲ್ಲಿ ಮಾತ್ರ ಆಗಿದೆ. ಇದನ್ನು ರಾಜಕೀಯ ಕಾರಣದಿಂದ ಮಾಡಲಾಗಿದೆ. ಕಾಂಗ್ರೆಸ್ ಇದರ ಹಿಂದಿದೆ, ಇದನ್ನು ಬಿಜೆಪಿ ಖಂಡಿಸಲಿದೆ ಎಂದರು.
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಆತುರ ಮಾಡಿಲ್ಲ. ಇದು ಬಹಳ ಸೂಕ್ಷ್ಮ ವಿಚಾರದಲ್ಲಿ ಚರ್ಚೆಯಾಗಬೇಕಾದ ವಿಷಯ. ಅಧ್ಯಯನ ನಡೆಯಬೇಕು, ಸಮಿತಿ ರಚಿಸಬೇಕು ಎಲ್ಲ ಮಾಡಿಯೇ ನಮ್ಮ ಸರ್ಕಾರ ಮೀಸಲಾತಿ ಜಾರಿ ಮಾಡಿದೆ. ಕಾಂಗ್ರೆಸ್ 60 ವರ್ಷ ಅಧಿಕಾರರದಲ್ಲಿದ್ದರೂ ಯಾವುದನ್ನೂ ಮಾಡಲಿಲ್ಲ. ಆದರೆ ನಾವು ಮಾಡಿದ್ದೇವೆ. ನಾವು 4 ವರ್ಷದಲ್ಲಿ ಮಾಡಿದ್ದೇವೆ, ಇವರು 60 ವರ್ಷ ಆಡಳಿತ ನಡೆಸಿದರೂ ಆಗದ್ದನ್ನು ನಮಗೆ ಇಚ್ಛಾಶಕ್ತಿ ಇರುವ ಕಾರಣಕ್ಕೆ ಕಡಿಮೆ ಅವಧಿಯಲ್ಲೇ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ಗೆ ಅಂಟಿರುವ ಶನಿಯೇ ಸುರ್ಜೇವಾಲಾ- ಕಟೀಲ್: ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಕುನಿ ಪಾತ್ರ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್ ನಾಯಕ ಸರ್ಜೇವಾಲಾ ಮಾಡಿದ್ದಾರೆ. ಆದರೆ ಈ ರಾಜ್ಯಕ್ಕೆ ಮತ್ತು ಕಾಂಗ್ರೆಸ್ಗೆ ಅಂಟಿರುವ ಶನಿಯೇ ಸುರ್ಜೇವಾಲಾ, ಅವರು ಬಂದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಃ ಪತನವಾಯಿತು. ಅಲ್ಲದೆ ಕಾಂಗ್ರೆಸ್ನಲ್ಲಿನ ಇಬ್ಬರ ಜಗಳವನ್ನು ಹೆಚ್ಚು ಮಾಡಿ ಮೂರನೇ ಜಗಳಕ್ಕೆ ಕಾರಣೀಭೂತರಾಗಿದ್ದಾರೆ ಎಂದು ನಳಿನ್ಕುಮಾರ್ ಆರೋಪಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ರಾಜಕಾರಣ ಮಾಡಿದ್ದ ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ. ಹಿಂದೂ ಸಮಾಜವನ್ನು ಒಡೆದು ಆಳಿದ್ದು ಕಾಂಗ್ರೆಸ್, ಹಿಂದೂಗಳಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್, ಹಿಂದೂ ಧರ್ಮದ ಅಧಃಪತನಕ್ಕೆ ಪ್ರಯತ್ನ ಪಟ್ಟಿದ್ದೇ ಕಾಂಗ್ರೆಸ್, ಹಿಂದೂಗಳ ಒಳಗೆ ಒಳಜಾತಿಯನ್ನು ತಂದು ಒಡೆದು ಆಳಿದ್ದು ಕಾಂಗ್ರೆಸ್, ವಿಭಜಿಸಿ ಆಳ್ವಿಕೆ ಮಾಡಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಎಂದೂ ತಷ್ಟೀಕರಣದ ರಾಜಕಾರಣ ಮಾಡುವುದಿಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡುವುದು ಸಂವಿಧಾನದಲ್ಲಿಯೇ ಇಲ್ಲ. ಆದರೂ ಇಂದು ಅದನ್ನು ತೆಗೆದು ಶೇ.10ರ ಇಡಬ್ಲುಎಸ್ ಅಡಿ ಕೊಡುವ ಕೆಲಸ ಮಾಡಲಾಗಿದೆ. ಹಾಗಾಗಿ ಅವರಿಗೆ ಅನ್ಯಾಯವಾಗುವುದಿಲ್ಲ. ನ್ಯಾಯವೇ ಸಿಗಲಿದೆ ಎಂದರು.
ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಆತಂಕಕ್ಕೆ ಒಳಗಾಗಬಾರದು- ಪಿ.ರಾಜೀವ್: ಯಡಿಯೂರಪ್ಪ ನಿವಾಸದ ಮೇಲೆ ದಾಳಿ ಹಿನ್ನೆಲೆ ಕುಡಚಿ ಶಾಸಕ ಪಿ ರಾಜೀವ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕರ್ನಾಟಕ ರಾಜ್ಯದ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದವರಲ್ಲಿ ಈ ನಾಲ್ಕು ಸಮುದಾಯಗಳನ್ನು ಪರಿಶಿಷ್ಟ ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಸಮುದಾಯದವರು ಕೆಲವರು ಈ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಹೋರಾಟದಲ್ಲಿ ಪ್ರಮುಖ ಎರಡು ಬೇಡಿಕೆಗಳಿದ್ದವು. ಕಳೆದ ಐವತ್ತು ಅರವತ್ತು ವರ್ಷಗಳಿಂದ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ಯಾವ ಮುಖ್ಯಮಂತ್ರಿಯೂ ಮಾಡಿರಲಿಲ್ಲ. ಆದ್ರೆ ಸಿಎಂ ಬೊಮ್ಮಾಯಿ ಈ ನಾಲ್ಕು ಸಮುದಾಯಗಳಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ತಾಂಡಾ ನಿಗಮ ಸ್ಥಾಪಿಸಿದ್ದು ಬಿ.ಎಸ್. ಯಡಿಯೂರಪ್ಪನವರು, ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ.4.5ಕ್ಕೆ ಹೆಚ್ಚಳ ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು. ಆದ್ರೆ ಕೆಲವರು ಆತಂಕ ಸೃಷ್ಟಿ ಮಾಡ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಮುದಾಯದ ಜನತೆ ಸುಳ್ಳು ಆಮಿಷಗಳಿಗೆ, ಉದ್ರೇಕಕ್ಕೆ ಒಳಗಾಗಬಾರದು ಎಂದು ಶಾಸಕ ರಾಜೀವ್ ತಿಳಿಸಿದರು.
ಇದನ್ನೂ ಓದಿ:ಲೋಕಾಯುಕ್ತ ಪೊಲೀಸರಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ