ಬೆಂಗಳೂರು:ನಿರ್ಮಾಪಕರಾಗಿರುವ ಮುನಿರತ್ನಗೆ ಕಣ್ಣೀರು ಹಾಕುವುದು ಗೊತ್ತು, ಕಣ್ಣೀರು ಹಾಕ್ಸೋದು ಇನ್ನೂ ಚೆನ್ನಾಗಿಯೇ ಗೊತ್ತಿದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಪರ ಬೆಂಗಳೂರಿನ ಜ್ಞಾನಭಾರತಿ ವಾರ್ಡ್ನಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವ್ಯಾವ ಸಮಯದಲ್ಲಿ ಯಾವ್ಯಾವ ಸೀನ್ ಯಾವಾಗ ಕಟ್ ಮಾಡ್ಬೇಕು, ಯಾವಾಗ್ ಜೋಡಿಸಬೇಕು ಅನ್ನೋದು ಮುನಿರತ್ನಗೆ ಗೊತ್ತಿದೆ.
ಅದರಲ್ಲಿ ಸಾಕಷ್ಟು ಅನುಭವ ಹೊಂದಿದವರು ಅವರು, ಆದ್ದರಿಂದ ಈಗ ಡ್ರಾಮಾ ಶುರು ಮಾಡಿದ್ದಾರೆ. ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದ ಮುನಿರತ್ನಗೆ ಈಗ ಅವೆಲ್ಲವೂ ಮರೆತು ಹೋಗಿರಬಹುದು. ಆದರೆ, ಕ್ಷೇತ್ರದ ಜನರು ಮರೆತಿಲ್ಲ ಎಂದರು.
ಮುನಿರತ್ನಗೆ ಕಟ್ ಮತ್ತು ಪೇಸ್ಟ್ ಮಾಡುವುದು ಚೆನ್ನಾಗಿಯೇ ತಿಳಿದಿದೆ, ಯಾವಾಗ ಯಾರನ್ನು ಅಳಿಸಬೇಕು, ಯಾವಾಗ ನಗಿಸಬೇಕು ಅನ್ನುವುದನ್ನ ಅರಿತವರು ಅವರು. ಅವರಿಗೆ ಈಗ ಕಾಂಗ್ರೆಸ್ ತಾಯಿ ಮರೆತು ಹೋಗಿದೆ. ಕೆಂಪು ರಕ್ತ ಹೋಗಿ ಇದೀಗ ಕೇಸರಿ ಆಗಿ ಬದಲಾಗಿದೆ. ಸಿನಿಮಾ ತೆಗೀಯೋರಿಗೆ ಇವೆಲ್ಲಾ ಗೊತ್ತಿರುತ್ತೆ. ಯಾರೇ ಏನೇ ಹೇಳಿಕೆ ನೀಡಿದ್ರೂ ಅದು ಬರೀ ರಾಜಕೀಯ ಹೇಳಿಕೆ ಮಾತ್ರ. ಆದರೆ, ನಾವು ವೈಯಕ್ತಿಕ ನಿಂದನೆ ಮಾಡಲ್ಲ, ನಮಗೂ ಜವಾಬ್ದಾರಿ ಇದೆ ಎಂದು ಡಿ ಕೆ ಸುರೇಶ್ ಹೇಳಿದ್ದಾರೆ.
ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎನ್ನುವ ಅಶೋಕ್ ಹೇಳಿಕೆ ವಿಚಾರ ಮಾತನಾಡಿ, ಅಶೋಕ್ ಅವರಿಗೆ, ಮಂತ್ರಿ ಮಂಡಲದ ಒಕ್ಕಲಿಗ ಸಚಿವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ನೇರ ಫೈಟ್ ಅವರವರಿಗೆ ಇರಲಿ. ಅವರು ನೂರಿ ಕುಸ್ತಿ ಮಾಡುವವರ ತರಹ. ನೂರಿ ಕುಸ್ತಿ ಎಂದರೆ ಏನು ಎಂದು ತಿಳಿಯದಿದ್ದರೆ ಅವರನ್ನೇ ಹೋಗಿ ಕೇಳಿ ಎಂದು ಕಂದಾಯ ಸಚಿವರ ಕಾಲೆಳೆದಿದ್ದಾರೆ.