ಬೆಂಗಳೂರು:ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಎಂ ಎಸ್ ಎಂ ಇ ಉದ್ದಿಮೆಗಳ ಪಾತ್ರ ಬಹಳ ಪ್ರಮುಖವಾಗಿದೆ. ದೇಶದ ಜಿಡಿಪಿಯಲ್ಲಿ ಎಂ ಎಸ್ಎಂ ಇ ವಲಯದ ಕೊಡುಗೆ ಶೇ. 40 ರಷ್ಟಿದೆ. ಇದರ ಜೊತೆಗೆ ಕೃಷಿ ವಲಯದ ನಂತರ ಉದ್ಯೋಗ ಸೃಜನೆಯಲ್ಲಿ ಎಂ ಎಸ್ಎಂ ಇ ವಲಯವು 2ನೇ ಸ್ಥಾನದಲ್ಲಿದೆ. ಕೈಗಾರಿಕಾ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಕರ್ನಾಟಕ 5ನೇ ಸ್ಥಾನದಲ್ಲಿದೆ.
2022ರ ಸೆಪ್ಟೆಂಬರ್ ಅಂತ್ಯದವರೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ವಿವಿಧ ಯೋಜನೆಗಳಿಗೆ ಒಟ್ಟು 55.64 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 688 ಫಲಾನುಭವಿಗಳಿಗೆ 49.08 ಕೋಟಿ ರೂ. ಸಹಾಯವನ್ನು ನೀಡಲಾಗಿದೆ. ಕರಕುಶಲ ವಲಯದಲ್ಲಿ 1.25 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ.
ಖಾದಿ ವಲಯದಲ್ಲಿ 7.50 ಕೋಟಿ ರೂ.ಗಳನ್ನು ಮಾರುಕಟ್ಟೆ ಮತ್ತು ವೇತನ ಪ್ರೋತ್ಸಾಹಕ ಸಹಾಯಧನವಾಗಿ ನೀಡಲಾಗುತ್ತದೆ. ಅದೇ ರೀತಿ 90 ಕೋಟಿ ರೂ.ಗಳನ್ನು ವಿವಿಧ ಸರ್ಕಾರಿ ಮಂಡಳಿಗಳು ಮತ್ತು ನಿಗಮಗಳಿಗೆ ಅವುಗಳ ಆಡಳಿತ ಮತ್ತು ಇತರ ವೆಚ್ಚಗಳಿಗಾಗಿ ಸರ್ಕಾರ ಬಿಡುಗಡೆ ಮಾಡಿದೆ.
2022ರ ಸೆಪ್ಟೆಂಬರ್ ಅಂತ್ಯದವರೆಗೆ ಎಸ್‌ಸಿಪಿ ಅಡಿ 358 ಫಲಾನುಭವಿಗಳಿಗೆ 94.10 ಕೋಟಿ ರೂ. ಆರ್ಥಿಕ ನೆರವು ಮತ್ತು ಟಿಎಸ್ಪಿ ಕಾರ್ಯಕ್ರಮದಡಿ 78 ಫಲಾನುಭವಿಗಳಿಗೆ 12.21 ಕೋಟಿ ರೂ. ಆರ್ಥಿಕ ನೆರವು ವೆಚ್ಚ ಮಾಡಲಾಗಿದೆ. ಈ ಯೋಜನೆಗಳ ಅಡಿ, ಸೈಟ್‌ಗಳಿಗೆ ಶೇ 75ರಷ್ಟು ಸಹಾಯಧನ, ಶೇ 60ರಷ್ಟು ಸಹಾಯಧನ, ವಿದ್ಯುತ್ ಸಹಾಯಧನ ಮತ್ತು ಸಾಲ ಮಂಜೂರಿ ಶುಲ್ಕ ಮರುಪಾವತಿಗಾಗಿ ಬಳಸಿಕೊಳ್ಳಲಾಗುತ್ತದೆ.
ಉದ್ಯೋಗಾವಕಾಶ ನಿರೀಕ್ಷೆ: ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿಗಳ ಮೂಲಕ, ಒಟ್ಟು 7788.83 ಕೋಟಿ ರೂ. ಯೋಜನಾ 1400 ಯೋಜನೆಗಳನ್ನು ಅನುಮೋದಿಸಲಾಗಿದೆ. ಈ ಮೂಲಕ 64341 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಬೀದರ್‌ನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 50:50 ವೆಚ್ಚ ಆಧಾರದಲ್ಲಿ ಒಟ್ಟು ರೂ. 90 ಕೋಟಿಗಳ ವೆಚ್ಚದಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ (CIPET) ವತಿಯಿಂದ ಕೌಶಲ್ಯ ಮತ್ತು ತಾಂತ್ರಿಕ ನೆರವು ಕೇಂದ್ರ (CSTS) ಸ್ಥಾಪಿಸಲು ಸರ್ಕಾರದಿಂದ ಉಚಿತವಾಗಿ 10 ಎಕರೆ ಭೂಮಿಯನ್ನು ಬೀದರ್ ಜಿಲ್ಲೆಯಲ್ಲಿ ಗುರುತಿಸಿ ಒದಗಿಸಿದ್ದು, ಸದರಿ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಯುವಜನತೆಗೆ ಉದ್ಯೋಗವಕಾಶಗಳು ದೊರಕಲಿವೆ.