ಬೆಂಗಳೂರು:ರಾಜ್ಯದಲ್ಲಿ ವರುಣ ಬೊಬ್ಬಿರಿದು ಅಬ್ಬರಿಸುತ್ತಿದ್ದು, ಜಲ ಪ್ರವಾಹವನ್ನೇ ಸೃಷ್ಟಿಸಿದ್ದಾನೆ. ಈ ಜಲಾಘಾತಕ್ಕೆ ಜನರು ಪರದಾಡುತ್ತಿದ್ದರೆ, ಇತ್ತ ರಸ್ತೆಗಳೇ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಕರಾವಳಿ ಕರ್ನಾಟಕ, ಮಲೆನಾಡು, ಕೊಡಗು ಹಾಗೂ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಸಂಪರ್ಕ ಕಡಿತವಾಗಿದೆ.
ವರುಣಾರ್ಭಟಕ್ಕೆ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು, ಸಂತ್ರಸ್ತರಾಗಿದ್ದರೆ, ಸುಮಾರು 40ಕ್ಕೂ ಹೆಚ್ಚು ಮಂದಿ ಜಲಪ್ರಳಯಕ್ಕೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಬೊಬ್ಬಿರಿಯುತ್ತಿರುವ ಮಳೆಗೆ ಗುಡ್ಡ ಕುಸಿತಗಳಾಗಿ ಹಲವು ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಅದರಲ್ಲೂ ಬೆಳಗಾವಿ, ಮಲೆನಾಡು ಪ್ರದೇಶದಲ್ಲಿ ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಭಾಗಗಳಿಗೆ ಸಂಪರ್ಕವೇ ಸಾಧ್ಯವಾಗದಂತಾಗಿದೆ.
ಮಳೆಯ ಆರ್ಭಟಕ್ಕೆ ಹಲವು ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕೊಚ್ಚಿ ಹೋಗಿ, ಸಂಪರ್ಕವೇ ದುಸ್ತರವಾಗಿದೆ. ಅದರ ಜೊತೆಗೆ ಸೇತುವೆಗಳೂ ಪ್ರವಾಹದ ರಭಸಕ್ಕೆ ನಾಮಾವಶೇಷಗೊಂಡಿದೆ. ಪ್ರಾಥಮಿಕ ವರದಿ ಪ್ರಕಾರ ಹಲವು ಕಡೆ ರಸ್ತೆಗಳು ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ಹಾನಿಗೊಳಗಾಗಿವೆ.
ಎನ್ಹೆಚ್ 66, ಎನ್ಹೆಚ್ 275, ಎನ್ಹೆಚ್ 75, ಎನ್ಹೆಚ್ 73, ಎಸ್ಹೆಚ್ 91 ಸೇರಿಂದಂತೆ ಹಲವು ಜಿಲ್ಲಾ ಸಂಪರ್ಕ ರಸ್ತೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರವಾಹ ಪೀಡಿತ ಭಾಗಗಳಲ್ಲಿ ರಸ್ತೆಗಳು ಹಾಗೂ ಸೇತುವೆ ಹಾನಿಯ ಪರಿಶೀಲನೆ ನಡೆಸುತ್ತಿದ್ದು, ಅಂತಿಮ ವರದಿ ಇನ್ನಷ್ಟೇ ಸಿದ್ಧವಾಗಬೇಕಾಗಿದೆ.
ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆ, ಸೇತುವೆಗಳೆಷ್ಟು?:
- ಹಾನಿಯಾದ ಒಟ್ಟು ರಸ್ತೆಗಳು 2,520 ಕಿ.ಮೀ.
- ಕೊಚ್ಚಿ ಹೋದ ಒಟ್ಟು ಸೇತುವೆ 546
- ಬೆಳಗಾವಿ ರಸ್ತೆ ಹಾನಿ 1,420 ಕಿ.ಮೀ.
- ಬೆಳಗಾವಿ ಸೇತುವೆ ಹಾನಿ 214
- ಧಾರವಾಡ ರಸ್ತೆ ಹಾನಿ 422 ಕಿ.ಮೀ.
- ಧಾರವಾಡ ಸೇತುವೆ ಹಾನಿ 48
- ಕೊಡಗು ರಸ್ತೆ ಹಾನಿ 420 ಕಿ.ಮೀ.
- ಚಿಕ್ಕಮಗಳೂರು ರಸ್ತೆ ಹಾನಿ 189 ಕಿ.ಮೀ.
- ದಕ್ಷಿಣ ಕನ್ನಡ ರಸ್ತೆ ಹಾನಿ 210 ಕಿ.ಮೀ.
- ಅಂದಾಜು ಒಟ್ಟು ಹಾನಿ 1,460 ಕೋಟಿ ರೂ.
- ಬ್ಲಾಕ್ ಆಗಿರುವ ಲೋಕೋಪಯೋಗಿ ರಸ್ತೆ 252