ಬೆಂಗಳೂರು:''ಶಾಸಕರಾದವರು ನಿಷ್ಪಕ್ಷಪಾತ ಮನೋಭಾವವನ್ನು ಹೊಂದಿರುವುದಲ್ಲದೇ ನೈತಿಕ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕಾಗುತ್ತದೆ'' ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು. ನೆಲಮಂಗಲದ ಕ್ಷೇಮವನದಲ್ಲಿ 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಆಯೋಜಿಸಲಾಗಿದ್ದ "ತರಬೇತಿ ಶಿಬಿರ"ದ ಮೂರನೇ ದಿನವಾದ ಇಂದು "ವಿಧಾನ ಮಂಡಲದ ಸಮಿತಿಗಳು, ಅವುಗಳಲ್ಲಿ ಸದಸ್ಯರುಗಳ ಪರಿಣಾಮಕಾರಿ ಭಾಗವಹಿಸುವಿಕೆ ಮತ್ತು ಸಮಿತಿ ಪದ್ಧತಿಯನ್ನು ಬಲಿಷ್ಠಗೊಳಿಸುವಿಕೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಪ್ರಜಾಪ್ರಭುತ್ವ ಉಳಿಯಬೇಕಾದಲ್ಲಿ ಅದರ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
''ವಿಧಾನ ಮಂಡಲದ ಎಲ್ಲಾ ಸಮಿತಿಗಳು ಉತ್ತಮವಾದವುಗಳೇ ಆಗಿರುತ್ತವೆ. ಶಾಸಕರುಗಳಾದ ತಾವುಗಳು ಮಂತ್ರಿಯಾಗಿ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸದೇ ಸಮಿತಿಯಲ್ಲಿ ಅಧ್ಯಯನಶೀಲರಾಗಿ ಕಾರ್ಯನಿರ್ವಹಿಸುವುದರಿಂದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆಂದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಾವುಗಳು ಶಾಸಕರಾಗಿ ಕಾರ್ಯಾಂಗ ಮತ್ತು ನ್ಯಾಯಾಂಗವು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಾಗ ವಿಶಾಲವಾದ ಅವಕಾಶಗಳು ಇರುತ್ತದೆ'' ಎಂದರು.
ಮಾದರಿ ಶಾಸಕರಾಗುವಂತೆ ಸಲಹೆ: ''ಸರ್ಕಾರದ ವಿವಿಧ ಇಲಾಖೆಗಳು ಸಮಿತಿಗೆ ಒದಗಿಸುವ ಮಾಹಿತಿಯು ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಅವುಗಳನ್ನು ಅಧ್ಯಯನ ಮಾಡುವಂತೆ ಸಲಹೆ ನೀಡಿದರು. ಸಮಯವನ್ನು ವ್ಯರ್ಥ ಮಾಡದೇ ಗ್ರಂಥಾಲಯಕ್ಕೆ ಹೋಗಿ ಅಧ್ಯಯನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ತಿಳಿ ಹೇಳಿದರು. ಸಾರ್ವಜನಿಕರ ಸೇವಕರಾಗಿರುವ ತಾವುಗಳು ಮಾದರಿ ಶಾಸಕರಾಗಬೇಕೆಂದು ತಿಳಿಸುತ್ತಾ ಆದರ್ಶ ಮತ್ತು ನೆಮ್ಮದಿಯ ಬದಕು ತಮ್ಮದಾಗಲಿ'' ಎಂದು ನುಡಿದರು.
"Cyber Safety and Security for Elected Representatives'' ಎಂಬ ವಿಷಯದ ಬಗ್ಗೆ ಡಾ.ಜಿ.ಅನಂತ ಪ್ರಭು ಅವರು ಮಾತನಾಡಿ, ''ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್, ಲ್ಯಾಪಟಾಪ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಅನಿವಾರ್ಯವಾಗಿದ್ದು, ಅವುಗಳನ್ನು ಅತ್ಯಂತ ಜಾಗ್ರತೆಯಿಂದ ಬಳಸಬೇಕೆಂದು ಪ್ರಾತ್ಯಕ್ಷಿಕೆಯ ಮೂಲಕ ಮಾನ್ಯ ಸದಸ್ಯರಿಗೆ ಮನದಟ್ಟಾಗುವಂತೆ ವಿವರಿಸಿದರು. ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದರು.