ಬೆಂಗಳೂರು: ಶಿವಾನಂದ ವೃತ್ತದಲ್ಲಿ 39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್ ಬ್ರಿಡ್ಜ್ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಯ ಅಕ್ರಮ ಶಿಶು. ಈ ಸೇತುವೆಯನ್ನು ಕಳಪೆ ಗುಣಮಟ್ಟದ ಬೇರಿಂಗ್, ಶಾಕ್ ಅಬ್ಸಾರ್ವರ್ ಬಳಸಿ ನಿರ್ಮಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ(ಎಎಪಿ) ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಗಸ್ಟ್ 15ರಿಂದ ಒಂದು ಬದಿಯ ಸಂಚಾರ ಆರಂಭವಾಗಿದೆ. ಅಲ್ಲಿ ಸಂಚರಿಸಿದರೆ ಕಳಪೆ ಕಾಮಗಾರಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸೇತುವೆಯಲ್ಲಿ ಸುಮಾರು 20 ಮೀಟರ್‌ಗೊಮ್ಮೆ ಜಾಯಿಂಟ್‌ಗಳಿದ್ದು, ವಾಹನ ಸವಾರರಿಗೆ ಕಿರಿಕಿರಿಯಾಗುವಂತಹ ಅವೈಜ್ಞಾನಿಕ ಹಂಪುಗಳನ್ನು ಹಾಕಲಾಗಿದೆ. ಲಘು ವಾಹನ ಸಂಚರಿಸಿದ್ರಂತೂ ಸೇತುವೆ ವೈಬ್ರೇಟ್ ಆಗುತ್ತದೆ ಎಂದು ದೂರಿದರು.
ಆಪ್ನ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಅಣಕು ಪ್ರದರ್ಶನ: ಆಗಸ್ಟ್ 30ರಂದು ಸೇತುವೆ ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಆಮ್ ಆದ್ಮಿ ಪಾರ್ಟಿಯು ಅದರ ಹಿಂದಿನ ದಿನ ಆಗಸ್ಟ್ 29ರಂದು ಉದ್ಘಾಟನೆಯ ಅಣಕು ಪ್ರದರ್ಶನ ನಡೆಸಿ ಕಳಪೆ ಕಾಮಗಾರಿಯನ್ನು ಬಯಲು ಮಾಡಲಿದೆ. ಈ ಮೂಲಕ ಭ್ರಷ್ಟ ಬಿಜೆಪಿ ಸರ್ಕಾರದ ಅವ್ಯವಹಾರದ ಕುರಿತು ಜನಜಾಗೃತಿ ಮೂಡಿಸುತ್ತೇವೆ ಎಂದು ಮೋಹನ್ ದಾಸರಿ ತಿಳಿಸಿದರು.
2017ರಲ್ಲಿ ಆರಂಭವಾದ ಕಾಮಗಾರಿ: 2017ರಲ್ಲಿ ಆರಂಭವಾದ ಕಾಮಗಾರಿಯು ಪೂರ್ಣಗೊಳ್ಳಲು ಇಷ್ಟು ವರ್ಷಗಳ ಸಮಯ ತೆಗೆದುಕೊಂಡಿರುವುದು ದುರಂತ. ಆರಂಭದಲ್ಲಿ ಕೇವಲ 19 ಕೋಟಿ ರೂಪಾಯಿಯಾಗಿದ್ದ ಕಾಮಗಾರಿ ಮೊತ್ತವು ಈಗ 39 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು 2,000 ಕೋಟಿ ರೂ. ವೆಚ್ಚದಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಬಾಳದ ತನಕ ಸ್ಟೀಲ್ ಸೇತುವೆ ನಿರ್ಮಾಣ ನೆಪದಲ್ಲಿ ಲೂಟಿಗೆ ಮುಂದಾದಾಗ, ಎಎಪಿ ಹಾಗೂ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆಗ ಸಿದ್ದರಾಮಯ್ಯನವರ ವಿರುದ್ಧ 500 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಇದರಿಂದ ಪ್ರೇರಣೆಗೊಂಡ ಬಿಜೆಪಿ ಸರ್ಕಾರವು ಅಕ್ರಮ ನಡೆಸಲೆಂದೇ ಸ್ಟೀಲ್ ಸೇತುವೆಯನ್ನು ಪೂರ್ಣಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಶಿವಾನಂದ ಸ್ಟೀಲ್ ಬ್ರಿಡ್ಜ್ ಓಪನ್: ಸದ್ಯ ಒಂದು ಬದಿ ಓಡಾಟ, ಆ.30ಕ್ಕೆ ಟೂ ವೇ ಸಂಚಾರ