ಬೆಂಗಳೂರು:ದೇಶ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇದು ಮೋದಿಯವರು ಪ್ರಧಾನಿ ಆದ ಮೇಲೆ ಆಗಿರುವಂತಹ ಬೆಳವಣಿಗೆ. ಇನ್ನು ಐದು ವರ್ಷ ಮೋದಿ ಪ್ರಧಾನಿಯಾದರೆ ಭಾರತ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಹಾಗಾಗಿ ದೇಶದ ಅಭಿವೃದ್ಧಿಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಹೇಳಿದ ಬಳಿಕ ರಾಜ್ಯದಲ್ಲಿ ಎಲ್ಲಿ ವಿಮಾನ ನಿಲ್ದಾಣ ಮಾಡಬೇಕು ಎಂದು ಯೋಚಿಸಿದೆ. ಆಗ ಹಲವು ಪ್ರಭಾವಿಗಳು ಕೆಂಗೇರಿ ಬಳಿಯ ನೈಸ್ ರಸ್ತೆ ಬಳಿ ಮಾಡಬೇಕು ಎಂದು ಒತ್ತಡ ಹಾಕಿದರು. ಆದರೆ ನಾನು ಐತಿಹಾಸಿಕ ಹಿನ್ನೆಲೆ ಇರುವ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಯ್ತು. ಇದಕ್ಕೆ ಸಾವಿರಾರು ಎಕರೆ ಜಮೀನನ್ನು ಇಲ್ಲಿನ ರೈತರು ನೀಡಿದರು. ಅದೇ ರೀತಿ ಈ ವಿಮಾನ ನಿಲ್ದಾಣಕ್ಕೆ ಯಾವ ಹೆಸರಿಡಬೇಕು ಎಂದಾಗ ಕೆಂಪೇಗೌಡರ ಹೆಸರಿಡಲಾಯ್ತು ಎಂದು ತಿಳಿಸಿದರು.
ನಾನು 60 ವರ್ಷಗಳ ಕಾಲ ಜೀವನ ನಡಸಿದ್ದೇನೆ. ಈ ಅವಧಿಯಲ್ಲಿ ಹಲವಾರು ಜನರನ್ನು ನೋಡಿದ್ದೇನೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೆಲಸ ಮಾಡ್ತಾರೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗಿಂತ ವಿಭಿನ್ನ. ಯಾವುದೇ ಪಿಎಂ ಆದರೆ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಆದರೆ ಮೋದಿ ಮನೆಯಲ್ಲಿ ಇದ್ದರೂ ಕೆಲಸ ಮಾಡುತ್ತಾರೆ. ಯಾವುದೇ ಸಮಯದಲ್ಲಿ ಹೋದರು ಕೆಲಸ ಮಾಡುವ ಮನೋಭಾವ ಅವರದ್ದು. ನಮ್ಮ ದೇಶದ ಬಗ್ಗೆ ಮೋದಿಗೆ ಅಪಾರ ವಿಶ್ವಾಸವಿದೆ. ಬೆಳಗ್ಗೆ, ರಾತ್ರಿ ಎಲ್ಲಾ ಸಮಯದಲ್ಲಿ ಕೆಲಸ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಸ್ವಚ್ಚ ಭಾರತ ಕಾರ್ಯಕ್ರಮದಿಂದ ಇಡೀ ದೇಶದಲ್ಲಿ ಶೇ. 98 ರಷ್ಟು ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಇದು ಮೋದಿ ನೀಡಿದ ಕೊಡುಗೆ ಎಂದು ಮೋದಿಯವರನ್ನು ಹಾಡಿ ಹೊಗಳಿದರು.
ಬಚ್ಚೇಗೌಡರು ಈ ಕ್ಷೇತ್ರದವರು. ಎಲ್ಲೋ ಕರಾವಳಿಯಿಂದ ನಮ್ಮನ್ನು ಪ್ರತಿನಿಧಿಸುವಂತ ಅವಕಾಶ ವೀರಪ್ಪ ಮೊಯ್ಲಿಗೆ ಹೇಗೆ ಬಂತು. ಇಲ್ಲೇ ಇರುವ ಬಚ್ಚೇಗೌಡರಿಗೆ ಅವಕಾಶ ನೀಡಬೇಕು. ಈ ಚುನಾವಣೆಯಲ್ಲಿ ಬಚ್ಚೇಗೌಡರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಮೋದಿಯವರ ಜೊತೆ ಕೆಲಸ ಮಾಡುವ ಅವಕಾಶವನ್ನು ಈ ಜನ ನೀಡುತ್ತಾರೆ ಅನ್ನೋ ವಿಶ್ವಾಸವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ಇದು ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕಾದರೆ ಮತ್ತೊಮ್ಮೆ ಮೋದಿಗೆ ಅವಕಾಶ ನೀಡಬೇಕು. ಮತ್ತೆ ಅವರು ಪ್ರಧಾನಿಯಾಗಬೇಕು. ಅದಕ್ಕೆ ನಿಮ್ಮ ಮತ ಬಿಜೆಪಿ ಹಾಕಬೇಕು ಎಂದು ಮನವಿ ಮಾಡಿದರು.
ಬಚ್ಚೇಗೌಡರು ಐದು ಬಾರಿ ಗೆದ್ದು ಎರಡು ಸಲ ಮಂತ್ರಿಯಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಬಚ್ಚೇಗೌಡರ ಕೊಡುಗೆ ಅಪಾರ. ಹೆಚ್ಚು ಹಾಲು ಉತ್ಪಾದಕರು ಇರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೈನುಗಾರಿಕೆ ಅಭಿವೃದ್ಧಿ ಮಾಡಿದ್ದು ಇದೇ ಬಚ್ಚೇಗೌಡರು. ಇದಲ್ಲದೇ ರೇಷ್ಮೆ ಅಭಿವೃದ್ಧಿ ಇವರೇ ಮಾಡಿದ್ದು ಎಂದರು.
ಬಚ್ಚೇಗೌಡರು ರೇಷ್ಮೆ ಸಚಿವರಾಗಿದ್ದಾಗ ಚೀನಾದಿಂದ ರೇಷ್ಮೆ ತಂದು ಇಲ್ಲಿನ ರೇಷ್ಮೆ ಬೆಳೆಗಾರರಿಗೆ ನಷ್ಟವನ್ನುಂಟು ಮಾಡಿತ್ತು. ಅಂದು ದೆಲ್ಲಿಯವರೆಗೂ ಹೋಗಿದ್ದ ಬಚ್ಚೇಗೌಡರು ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಿಸಿ ರೇಷ್ಮೆ ಬೆಳೆಗಾರರಿಗೆ ನೆರವಾಗಿದ್ದಾರೆ ಎಂದು ಶರತ್ ಬಚ್ಚೇಗೌಡರ ಹೇಳಿದರು.
ಇದಲ್ಲದೇ ವೀರಪ್ಪಮೊಯ್ಲಿ ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರು ಎತ್ತಿನಹೊಳೆ ಮೂಲಕ ನೀರು ತರುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಗೆದ್ದಿದ್ದಾರೆ.
ಇದುವರೆಗೂ ನೀರು ತರುವ ವ್ಯವಸ್ಥೆ ಮಾಡಿಲ್ಲ. ನಾವು ನೀರಿಗಾಗಿ ಪ್ರತಿಭಟನೆ ಮಾಡಿದ್ದಾಗ ಪೊಲೀಸರ ಮೂಲಕ ಬ್ಯಾರಿಕೇಡ್ ಹಾಕಿಸಿ ಪ್ರತಿಭಟನೆಯನ್ನು ತಡೆಯುವ ಕೆಲಸ ಮಾಡಿದ್ರು. ಎತ್ತಿನಹೊಳೆ ಯೋಜನೆ ಇಟ್ಟುಕೊಂಡು ಎರಡು ಬಾರಿ ಗೆದ್ದ ಅವರು ನೀರು ತರಲು ಇನ್ನು ಸಾಧ್ಯವಾಗಿಲ್ಲ. ಇನ್ನು ಎರಡು ಅವಕಾಶ ಕೊಡಿ ನೀರು ತರುತ್ತೇನೆ ಎಂದು ಹೇಳುತ್ತಿದ್ದಾರೆ. ನೀರನ್ನು ಯಾವುದರಲ್ಲಿ ತರುತ್ತಾರೆ ಎಂದು ಮೊಯ್ಲಿಗೆ ಪ್ರಶ್ನೆ ಮಾಡಿದ್ರು.