ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರೋಡ್ ಶೋ ಆರಂಭವಾಗಿದೆ. ಸದ್ಯ ರಾಜಭವನದಿಂದ ಹೊರಟಿರುವ ಮೋದಿ, ಮೇಖ್ರಿ ವೃತ್ತ ಸಮೀಪದ ಹೆಲಿಪ್ಯಾಡ್ನಿಂದ ಜೆ.ಪಿ. ನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬೃಹತ್ ಐತಿಹಾಸಿಕ ರ‍್ಯಾಲಿ ಶುರುವಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 13 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಮೋದಿ ರೋಡ್ ಶೋ ನಡೆಸುತ್ತಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದ ಸೋಮೇಶ್ವರ ದೇವಾಲಯದಿಂದ ಈ ರ‍್ಯಾಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜಭವನದಿಂದ ಆಗಮಿಸಿದರು. ರ‍್ಯಾಲಿಗೆ ಬೆಂಗಳೂರು ನಗರದ ಮೂವರು ಸಂಸದರು ಸಾಥ್ ನೀಡಿದ್ದಾರೆ. ಪ್ರಧಾನಿ ಸಾಗಿ ಹೋಗುವ ಮಾರ್ಗದ ಇಕ್ಕೆಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಮುಂಭಾಗ ಬೃಹತ್ ರಂಗೋಲಿ ಹಾಕಿ ಮೊದಿಗೆ ಸ್ವಾಗತ ಕೋರಲಾಗುತ್ತಿದೆ.
ಪ್ರಧಾನಿ ಮೋದಿ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನಿಂದ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂದರೆ ಬರೋಬ್ಬರಿ 26 ಕಿ.ಮೀ. ರೋಡ್ ಶೋ ನಡೆಸುತ್ತಿದ್ದಾರೆ. ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನವನ್ನೂ ಮೋದಿ ಸಾಗುವ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಸಾರಕ್ಕಿ ಜಂಕ್ಷನ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ರಾಮಕೃಷ್ಣ ಆಶ್ರಮ, ಮಕ್ಕಳ ಕೂಟ, ಟೌನ್ ಹಾಲ್, ಕಾವೇರಿ ಭವನ, ಮೆಜೆಸ್ಟಿಕ್, ಮಾಗಡಿ ರೋಡ್, ಜಿಟಿ ವರ್ಲ್ಡ್ ಮಾಲ್, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ಶಂಕರ ಮಠ ಸರ್ಕಲ್, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ಸರ್ಕಲ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ ಮಾರ್ಗವಾಗಿ ಸರ್ಕಲ್ ಮಾರಮ್ಮ ಟೆಂಪಲ್ವರೆಗೆ ರ‍್ಯಾಲಿಯಲ್ಲಿ ಆಗಮಿಸಲಿದ್ದಾರೆ. ವಿಶೇಷ ಪೊಲೀಸ್ ಬಂದೋಬಸ್ತ್ ಆಯೋಜಿಸಿರುವುದು ಮಾರ್ಗದಲ್ಲಿ ಕಂಡು ಬರುತ್ತಿದೆ.
ಅಭಿಮಾನಿಗಳು ಪಕ್ಷದ ಬಾವುಟ ಹಿಡಿದು, ಶಾಲು ಧರಿಸಿ ಸಂಭ್ರಮದಿಂದ ಮೋದಿ ಆಗಮನಕ್ಕೆ ಕಾಯುತ್ತಿದ್ದಾರೆ. ಪ್ರಧಾನಿ ಸಾಗಿಬರುವ ಮಾರ್ಗದುದ್ದಕ್ಕೂ ಹೂವಿನ ಮಳೆಗರೆಯಲು ಜನ ಕಾದು ನಿಂತಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಕಳೆದ ವಾರ ರೋಡ್ ಶೋ ನಡೆಸಿದ್ದ ವೇಳೆ ಮೊಬೈಲ್ ಒಂದು ಮೋದಿಯತ್ತ ತೂರಿ ಬಂದಿತ್ತು. ಹೂವಿನ ಜತೆ ಅಭಿಮಾನಿಯೊಬ್ಬರು ಮೊಬೈಲ್ ಸಹ ಎಸೆದಿದ್ದರು. ಅಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.