ಕರ್ನಾಟಕ

karnataka

ETV Bharat / state

ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಮೋದಿ ಸರ್ಕಾರ ಬದ್ಧ: ಸಚಿವ ಡಿ.ವಿ. ಸದಾನಂದ ಗೌಡ - provide quality healthcare

ದೇಶದ ಜನತೆಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೊಡ್ಡ ಸಂಖ್ಯೆಯಲ್ಲಿ ದೇಶದಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

ಸಚಿವ ಸದಾನಂದ ಗೌಡ
ಸಚಿವ ಸದಾನಂದ ಗೌಡ

By

Published : Jun 26, 2020, 10:05 PM IST

ನವದೆಹಲಿ/ಬೆಂಗಳೂರು:ಕರ್ನಾಟಕ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆ ಇ- ಮನಸ್ ಶಾಸನದ ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸುವ ಮಾರ್ಗವಾಗಿದ್ದು, ಇದು ಖಾಸಗಿ ವಲಯಕ್ಕೂ ಲಭ್ಯವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ ರಾಷ್ಟ್ರೀಯ ಮಹತ್ವದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ ಓಪಿಡಿ ಸಮುಚ್ಛಯ ಶಿಲಾನ್ಯಾಸ ಮತ್ತು ಇ- ಮನಸ್ ತಂತ್ರಾಂಶ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡ ಅವರು, ದೇಶದ ಜನತೆಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೊಡ್ಡ ಸಂಖ್ಯೆಯಲ್ಲಿ ದೇಶದಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ

ಕೇಂದ್ರ ಸರ್ಕಾರ ಕೈಗೆಟಕುವ ದರದಲ್ಲಿ ದೇಶದ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಆಯುಷ್ಮಾನ್ ಭಾರತ್, ಇಂಧ್ರಧನುಷ್, ಜನೌಷಧದಂಥ ಮಹತ್ವಪೂರ್ಣ ಯೋಜನೆ ಕಾರ್ಯಗತಗೊಳಿಸಿದೆ ಎಂದು ತಿಳಿಸಿದರು.

ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ನಿಮ್ಹಾನ್ಸ್ ಸಹಯೋಗದಲ್ಲಿ ಇ-ಮನಸ್ ಅಭಿವೃದ್ಧಿಪಡಿಸಲು ಶ್ರಮಿಸಿದ ಪದ್ಮಶ್ರೀ ಪ್ರೊ. ಗಂಗಾಧರ್ ಮತ್ತು ತಂಡಕ್ಕೆ ಮತ್ತು ಐಐಐಟಿಗೆ ಸಚಿವರು ಅಭಿನಂದನೆ ಸಲ್ಲಿಸಿದರು. ಈ ನೂತನ ಉಪಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಜನತೆಗೆ ತಿಳಿಸಿದರು.

ಬೆಂಗಳೂರು ಉತ್ತರ ಭಾಗದ ಜನರಿಗೆ ಅನುಕೂಲವಾಗಲಿರುವ ಓಪಿಡಿಗಾಗಿ ಜಮೀನು ನೀಡಿದ ಮತ್ತು ನಿಮ್ಹಾನ್ಸ್​ಗೆ ಎಲ್ಲ ರೀತಿಯ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವರು, ಕಾರ್ಯದರ್ಶಿಗಳನ್ನೂ ಅವರು ಅಭಿನಂದಿಸಿದರು.

ರೋಗಿಗಳ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲರುವ ನಿಮ್ಹಾನ್ಸ್​​ನಲ್ಲಿ ವಾರ್ಷಿಕ ಆರು ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ರಾಜ್ಯದ ಮತ್ತು ದೇಶದ ಹಲವು ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಕಾರ್ಯವನ್ನು ಈ ಮಾನಸಿಕ ಸಂಸ್ಥೆ ಮಾಡುತ್ತಿದೆ ಎಂದರು.

ತಂತ್ರಾಂಶಕ್ಕೆ ಚಾಲನೆ ನೀಡಿ, ಹೊರರೋಗಿಗಳ ವಿಭಾಗಕ್ಕೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಬೆಂಗಳೂರಿನ ಸಂಸತ್ ಸದಸ್ಯರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ನಿಮ್ಹಾನ್ಸ್ ನ ಪ್ರೊಫೆಸರ್ ಪದ್ಮಶ್ರೀ ಡಾ. ಗಂಗಾಧರ್ ಮತ್ತಿತರರು ಪಾಲ್ಗೊಂಡಿದ್ದರು.

ABOUT THE AUTHOR

...view details