ಬೆಂಗಳೂರು: ಪ್ರಯಾಣದ ವೇಳೆ ಕೆಲ ಮೊಬೈಲ್ ಬಳಕೆದಾರರು ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸೋಮವಾರ ನಡೆಯಿತು. ಸಾರ್ವಜನಿಕ ಸಾರಿಗೆಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ರೈಲುಗಳಲ್ಲಿ ಮೊಬೈಲ್ ಫೋನ್ಗಳಿಂದ ಉಂಟಾಗುವ ಕಿರಿಕಿರಿ ಹಾಗೂ ಶಬ್ದ ಮಾಲಿನ್ಯ ತಪ್ಪಿಸಲು ತೆಗೆದುಕೊಳ್ಳಲಾದ ಕ್ರಮದ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.
ಸಾರ್ವಜನಿಕ ಸಾರಿಗೆಯಲ್ಲಿ ಮೊಬೈಲ್ ಬಳಕೆ: ಕ್ರಮಗಳ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಸಾರ್ವಜನಿಕ ಸಾರಿಗೆಯಲ್ಲಿ ಮೊಬೈಲ್ ಬಳಕೆಯಿಂದ ಉಂಟಾಗುವ ಶಬ್ದ ಮಾಲಿನ್ಯ ತಡೆಗೆ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲು ಹೈಕೋರ್ಟ್ ಕೇಂದ್ರ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ರೈಲುಗಳಲ್ಲಿ ಕೆಲವು ಪ್ರಯಾಣಿಕರು ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ರಮೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಅರ್ಜಿದಾರ ವಕೀಲರು ವಾದ ಮಂಡಿಸಿ, ಸ್ಮಾರ್ಟ್ ಫೋನ್ಗಳಲ್ಲಿ ಓಪನ್ ಸ್ಪೀಕರ್ ಇಟ್ಟುಕೊಂಡು ಜೋರು ಧ್ವನಿಯಲ್ಲಿ ಆಡಿಯೋ, ವಿಡಿಯೋಗಳನ್ನು ಪ್ಲೇ ಮಾಡ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಲ್ಲದೆ ಇದರಿಂದ ಶಬ್ದ ಮಾಲಿನ್ಯ ಸಹ ಉಂಟಾಗುತ್ತಿದೆ. ಇದರ ತಡೆಗೆ ಅಗತ್ಯ ನಿಯಮಗಳನ್ನು ರೂಪಿಸಬೇಕು. ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ, ಧೂಮಪಾನ ನಿಷೇಧದ ರೀತಿಯ ಫಲಕಗಳ ಹಾಗೆ ಶಬ್ದ ಮಾಲಿನ್ಯಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಹೈಕೋರ್ಟ್ ನ್ಯಾಯಪೀಠ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಮೊಬೈಲ್ ಫೋನ್ಗಳಿಂದ ಉಂಟಾಗುವ ಕಿರಿಕಿರಿ ಹಾಗೂ ಶಬ್ದ ಮಾಲಿನ್ಯ ತಪ್ಪಿಸಲು ತೆಗೆದುಕೊಳ್ಳಲಾದ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದೆ.