ಕರ್ನಾಟಕ

karnataka

ಹಿಂದುಳಿದ ವರ್ಗಗಳ ಇಲಾಖೆ ಸಂಪೂರ್ಣ ನಿಷ್ಕ್ರಿಯ: ಆಡಳಿತ ಪಕ್ಷದ ಶಾಸಕರಿಂದಲೇ ಆರೋಪ

By ETV Bharat Karnataka Team

Published : Dec 13, 2023, 5:49 PM IST

ಹಿಂದುಳಿದ ವರ್ಗಗಳ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆಡಳಿತ ಪಕ್ಷದ ಶಾಸಕರೇ ಆರೋಪಿಸಿರುವ ಘಟನೆ ಇಂದು ವಿಧಾನಸಭೆಯಲ್ಲಿ ನಡೆದಿದೆ.

ಶಾಸಕ ಬಸವರಾಜು ವಿ ಶಿವಗಂಗಾ
ಶಾಸಕ ಬಸವರಾಜು ವಿ ಶಿವಗಂಗಾ

ಶಾಸಕ ಬಸವರಾಜು ವಿ ಶಿವಗಂಗಾ

ಬೆಂಗಳೂರು :ಹಿಂದುಳಿದ ವರ್ಗಗಳ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆಡಳಿತ ಪಕ್ಷದ ಶಾಸಕರೇ ಆರೋಪಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು. ಪ್ರಶ್ನೋತ್ತರ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜು ವಿ ಶಿವಗಂಗಾ ಅವರು, ಸದನಕ್ಕೆ ತಡವಾಗಿ ಬಂದಿದ್ದು, ವಿಳಂಬಕ್ಕೆ ಕಾರಣ ಏನು ಎಂದು ಸ್ಪೀಕರ್ ಯು ಟಿ ಖಾದರ್ ಅವರು ಪ್ರಶ್ನಿಸಿದರು. ನಾನು ಬಿಳಿ ಶರ್ಟ್ ಧರಿಸಿ ಬಂದಿದ್ದೆ. ಹಿಂದುಳಿದ ವರ್ಗಗಳ ಇಲಾಖೆ ನಿಷ್ಕ್ರಿಯವಾಗಿದೆ. ಅದರ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಕಪ್ಪು ಬಣ್ಣದ ಶರ್ಟ್ ಧರಿಸಿ ಬರಲು ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು.

ಶಾಸಕ ಬಸವರಾಜು ವಿ ಶಿವಗಂಗಾ

ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಅವರು, ಆ ರೀತಿಯೆಲ್ಲ ಕಪ್ಪು ಬಟ್ಟೆ ಧರಿಸುವಂತಿಲ್ಲ. ಆದರೂ ಪರವಾಗಿಲ್ಲ. ಕಪ್ಪು ಬಟ್ಟೆ ಚೆನ್ನಾಗಿ ಕಾಣುತ್ತಿದೆ ಎಂದರು. ಪ್ರಶ್ನೆಯನ್ನು ಮುಂದುವರೆಸಿದ ಬಸವರಾಜು ವಿ ಶಿವಗಂಗಾ, ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಭಿವೃದ್ಧಿ ನಿಗಮಗಳ ಸಾಲ ಸೌಲಭ್ಯಕ್ಕೆ ಭೌತಿಕ ಗುರಿ ಈಡೇರದೆ, ಬಡವರಿಗೆ ಸೌಲಭ್ಯ ದೊರೆಯದೇ ವಂಚಿತವಾಗುತ್ತಿದೆ ಎಂದು ಆರೋಪಿಸಿದರು.

ಸಚಿವ ಶಿವರಾಜ್ ತಂಗಡಗಿ

ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ 12, ಸ್ವಯಂ ಉದ್ಯೋಗಕ್ಕಾಗಿ 4, ಸ್ವಾವಲಂಬಿ ಸಾರಥಿ ಯೋಜನೆಯಡಿ 2 ಫಲಾನುಭವಿಗಳಿಗೆ ಮಾತ್ರ ಮಂಜೂರಾತಿ ಸಿಕ್ಕಿದೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿರುವ ಅಧಿಕಾರಿ, ನಿಮ್ಮದೇ ಸರ್ಕಾರ, ಹೋಗಿ ಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಉದ್ಧಟತನದಿಂದ ಉತ್ತರಿಸುತ್ತಾರೆ. ನಾನು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಸದಸ್ಯನಾಗಿದ್ದೇನೆ. ಇಲಾಖೆ ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೆ, ಕೋಟ್ಯಂತರ ರೂ. ಖರ್ಚು ಮಾಡಿ ಸಮಾವೇಶ ಮಾಡಲಾಗುತ್ತದೆ. ಬಡವರಿಗೆ ಸೌಲಭ್ಯ ನೀಡಲು ಹಣವಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೂಪಾ ಶಶಿಧರ್

ಶಾಸಕ ನರೇಂದ್ರಸ್ವಾಮಿ ಕೂಡ ಇಲಾಖೆಯ ಕಾರ್ಯದರ್ಶಿ ವಿರುದ್ಧ ಆಕ್ರೋಶ ಹೊರಹಾಕಿದರು. ಆಡಳಿತ ಪಕ್ಷದ ಶಾಸಕರ ಅಸಮಾಧಾನಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಶರಣು ಸಲಗಾರ, ಆಡಳಿತ ಪಕ್ಷದ ಶಾಸಕರೇ ಈ ಸರ್ಕಾರ ದಿವಾಳಿಯಾಗಿದೆ, ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಚಾಯಿಸಿದರು. ಆಗ ಕಾಂಗ್ರೆಸ್ ಶಾಸಕರಾದ ರೂಪಾ ಶಶಿಧರ್, ಶರತ್ ಬಚ್ಚೇಗೌಡ, ಕೋನರೆಡ್ಡಿ ಮತ್ತಿತರರು ಇದು ಆರು ತಿಂಗಳ ಸಮಸ್ಯೆಯಲ್ಲ. ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಸಮಜಾಯಿಷಿ ನೀಡಿದರು.

ಶಾಸಕ ನರೇಂದ್ರಸ್ವಾಮಿ

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಅಭಿಲಾಷೆ ಕೂಡ. ಆದರೆ ಹಣಕಾಸಿನ ಇತಿಮಿತಿಗಳು ಅದಕ್ಕೆ ಸಹಕರಿಸುವುದಿಲ್ಲ. ಲಭ್ಯತೆ ಆಧರಿಸಿ ಆದ್ಯತೆ ಮೇರೆಗೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಶಾಸಕರು ಪ್ರಸ್ತಾಪಿಸಿದಂತೆ ನಮ್ಮಲ್ಲಿ ಹಾಸ್ಟೆಲ್ ವಾರ್ಡನ್​ಗಳ ಕೊರತೆ ಇರುವುದು ನಿಜ. ಒಬ್ಬೊಬ್ಬರಿಗೆ ನಾಲ್ಕು-ಐದು ಹಾಸ್ಟೆಲ್​ಗಳ ಉಸ್ತುವಾರಿ ವಹಿಸಲಾಗಿದೆ. ಬೇರೆ ಇಲಾಖೆಗಳಿಂದಲೂ ಕೂಡ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಕರೆಸಿಕೊಳ್ಳಲಾಗಿದೆ ಎಂದರು. ಕಾರ್ಯದರ್ಶಿ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಕೆಲವು ವೇಳೆ ಶಾಸಕರಿಗೆ ನೋವಾಗುವಂತಹ ಘಟನೆಗಳು ನಡೆದಿವೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ :ಹಳದಿ ಎಲೆ ಹಾಗೂ ಎಲೆ ಚುಕ್ಕೆ ರೋಗ ನಿವಾರಣೆಗೆ ಸೂಕ್ತ ಕ್ರಮ: ಕೃಷಿ ಸಚಿವ ಚಲುವರಾಯಸ್ವಾಮಿ

ABOUT THE AUTHOR

...view details