ಬೆಂಗಳೂರು: ಶಾಸಕ ತನ್ವೀರ್ ಸೇಠ್ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಯುವ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ನಿನ್ನೆ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಲು ತನ್ವೀರ್ ಸೇಠ್ ಪಕ್ಷದ ಕಚೇರಿಗೆ ಮಧ್ಯಾಹ್ನ ಆಗಮಿಸಿದ್ದರು. ಆದರೆ, ಭೇಟಿ ಸಾಧ್ಯವಾಗಿಲ್ಲ. ಅಧ್ಯಕ್ಷರು ಕೋಲಾರಕ್ಕೆ ತೆರಳಿದ್ದ ಹಿನ್ನೆಲೆ ವಾಪಸ್ ತೆರಳಿದ್ದಾರೆ. ಇಂದು ಮತ್ತೊಮ್ಮೆ ಆಗಮಿಸಿ ಭೇಟಿಯಾಗುವ ಸಾಧ್ಯತೆಯಿದೆ ಎಂದರು.
ಮಹತ್ವದ ಸಭೆ:
ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆದಿದ್ದ ಈ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರೆಲ್ಲಾ ಭಾಗಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾದ ಹೋರಾಟಗಳು ಹಾಗೂ ಆಯೋಜಿಸುವ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ. ಯುವ ಕಾಂಗ್ರೆಸ್ನ ಎಲ್ಲಾ ಪದಾಧಿಕಾರಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಜಿಲ್ಲಾ ಹಾಗೂ ರಾಜ್ಯ ಯುವ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ಧವಾಗಬೇಕು ಎಂಬ ಸಂದೇಶ ಅಧ್ಯಕ್ಷರಿಂದ ರವಾನೆಯಾಗಿದೆ ಎಂದರು.
ಯುವ ಕಾಂಗ್ರೆ ಸ್ನ ಎಲ್ಲಾ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ತಮ್ಮ ಸಂಪೂರ್ಣ ಸಹಕಾರ ನೀಡುವ ಭರವಸೆ ಕೊಟ್ಟಿದ್ದಾರೆ. ರಾಜ್ಯದ ವಿವಿಧ ಜಿಲ್ಲೆ ತಾಲೂಕುಗಳಿಂದ ಇಂದು ಕಾಂಗ್ರೆಸ್ ಪದಾಧಿಕಾರಿಗಳು ಆಗಮಿಸಿದ್ದರು. ಅವರೊಂದಿಗೆ ಚರ್ಚಿಸಿ ಪಕ್ಷ ಸಂಘಟನೆ ಸಂಬಂಧ ನಿಲುವು ಕೈಗೊಳ್ಳಲು ಒತ್ತು ಕೊಟ್ಟಿದ್ದೇವೆ ಎಂದು ಸಲೀಂ ಅಹ್ಮದ್ ತಿಳಿಸಿದರು.