ಶಾಸಕ ಸೋಮಶೇಖರ್ ಮಾಧ್ಯಮ ಪ್ರತಿಕ್ರಿಯೆ ಬೆಂಗಳೂರು:ಪಕ್ಷ ಬಿಡುವ ಕುರಿತು ನಾನು ಯಾರೊಂದಿಗೂ ಮಾತುಕತೆ ನಡೆಸಿಲ್ಲ, ಮುಂಬರಲಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆಗೆ ಸ್ಪರ್ಧೆ ಬಯಸಿರುವವರು ಮಾತ್ರ ಕಾಂಗ್ರೆಸ್ ಸೇರಿದ್ದಾರೆ. ನನ್ನೊಂದಿಗೆ ಇರಲು ಬಯಸಿರುವ ಬೆಂಬಲಿಗರು ಬಿಜೆಪಿಯಲ್ಲೇ ಇದ್ದಾರೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟೀಕರಣ ನೀಡಿದ್ದಾರೆ.
ಯಶವಂತಪುರ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ನಾಯಕರ ಜತೆಗೂ ಇದರ ಬಗ್ಗೆ ಮಾತನಾಡಿಲ್ಲ ಸಿಎಂ ಜತೆಗೂ ರಾಜಕೀಯ ವಿಚಾರವಾಗಿ ಮಾತನಾಡಿಲ್ಲ. ಕಾಂಗ್ರೆಸ್ಗೆ ನನ್ನ ಬೆಂಬಲಿಗರು ಅಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಿಂದಲೂ ಹೋಗಿದ್ದಾರೆ ಯಾರು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿಗೆ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದಾರೋ ಅವರು ಕಾಂಗ್ರೆಸ್ಗೆ ಹೋಗಿದ್ದಾರೆ.
ಯಾರು ಶಾಸಕರ ಜತೆ ಇರಬೇಕು ಅಂದುಕೊಂಡಿದ್ದಾರೋ ಅವರು ನನ್ನ ಜತೆಯೇ ಇದ್ದಾರೆ ನನ್ನ ಜತೆ 85 ಮುಖಂಡರು ಉಳಿದುಕೊಂಡಿದ್ದಾರೆ, ಯಡಿಯೂರಪ್ಪ ಜತೆಗೂ ಮಾತುಕತೆ ನಡೆಸಿದ್ದೇನೆ. ದುಡುಕಬೇಡ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ, ನಾನು ದುಡುಕುತ್ತಿಲ್ಲ ಎಂದರು.
ಪ್ರಧಾನಿ ಮೋದಿ ಭೇಟಿ ವೇಳೆ ಗೈರು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸೋಮಶೇಖರ್, ನನಗೆ ಎರಡು ಬಸ್ನಲ್ಲಿ ಜನ ಕಳಿಸಿ ಅಂತಾ ಅಷ್ಟೇ ಇಲ್ಲಿನ ಯಶವಂತಪುರ ಅಧ್ಯಕ್ಷರು ಹೇಳಿದ್ದರು. ಹಿಂದಿನ ದಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ಮಾಡಿದ್ದಾರೆ. ಆ ಸಭೆ ಬಗೆಗೂ ನನಗೆ ಮಾಹಿತಿ ಇರಲಿಲ್ಲ, ಮೋದಿ ಎಷ್ಟೊತ್ತಿಗೆ ಬರ್ತಾರೆ. ಹೇಗೆ ಬರ್ತಾರೆ ಅನ್ನುವ ಮಾಹಿತಿ ಕೂಡ ಇರಲಿಲ್ಲ. ಸುಮಾರು ಮೂರೂವರೆ ವರ್ಷದ ಅವಧಿಯಲ್ಲಿ ಬಿಜೆಪಿಯ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂಬ ಕಪ್ಪುಚುಕ್ಕೆ ಒಂದೇ ಒಂದು ಇಲ್ಲ. ಇತ್ತಿಚೇಗೆ ಎರಡು ಮೂರು ಕಾರ್ಯಕ್ರಮಕ್ಕೆ ಹೋಗಿಲ್ಲ ಎಂಬ ಮಾಹಿತಿ ಇರಬಹುದು 100 ಕ್ಕೆ ಶೇ 99ರಷ್ಟು ಪಕ್ಷ ಹಾಗೂ ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಪರೋಕ್ಷವಾಗಿ ಮೋದಿ ಸಭೆಗೆ ಆಹ್ವಾನವಿರಲಿಲ್ಲ ಎಂದರು.
ಸಭೆಗೆ ಸ್ಪಷ್ಟೀಕರಣ:ನನಗೆ ಅಧಿಕಾರಿಗಳು ವಾರದ ಹಿಂದೆ ಗೃಹಲಕ್ಷ್ಮಿ ಯೋಜನೆಯ ಸಮಾರಂಭಕ್ಕೆ ಬರಬೇಕು ಅಂತ ಕರೆದರು ನಾನು ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡೆ ನಮ್ಮ ಕ್ಷೇತ್ರದ 62 ಸಾವಿರ ಬಿಪಿಎಲ್ ಕಾರ್ಡ್ದಾರರ ಯೋಜನೆಯ ಲಾಭ ಕೊಡಿಸಲು ಈ ಸಭೆ ಮಾಡುತ್ತಿದ್ದೇವೆ ಇದರ ಜೊತೆ ಗೃಹಜ್ಯೋತಿ ಯೋಜನೆಯಲ್ಲಿ ನಮ್ಮ ಕ್ಷೇತ್ರದಲ್ಲಿ 1.97 ಲಕ್ಷ ಫಲಾನುಭವಿಗಳಿದ್ದಾರೆ.
ಪಂಚಾಯಿತಿ ಎಲ್ಲ ಸದಸ್ಯರನ್ನೂ ಕರೆದು ಮಾಹಿತಿ ಕೊಟ್ಟಿದ್ದೇನೆ ಯಾವುದೇ ಕಾರಣಕ್ಕೂ ಸರ್ಕಾರದ ಫಲ ಜನಸಾಮಾನ್ಯರಿಗೆ ಸಿಗದಂತಾಗಬಾರದು
ಈ ಕಾರಣಕ್ಕೆ ಸಭೆ ನಡೆಸಿದ್ದೇನೆ ಎಂದು ಸೋಮಶೇಖರ್ ಸ್ಪಷ್ಟೀಕರಣ ನೀಡಿದರು.
ನಾನೊಬ್ಬ ಜವಾಬ್ದಾರಿಯುತ ಶಾಸಕನಾಗಿ ಸರ್ಕಾರದ ಯೋಜನೆ ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಇದರ ವಿನಃ ಇದರಲ್ಲಿ ಬೇರೇನೂ ವಿಶೇಷ ಇಲ್ಲ. ಈ ಸಭೆ ಬಿಜೆಪಿಗೆ ಮುಜುಗರ ತರಲ್ಲ. ನನಗೆ ಸಾರ್ವಜನಿಕರು ಸರ್ಕಾರದ ಯೋಜನೆ ಯಾಕೆ ಕೊಡುತ್ತಿಲ್ಲ ಅಂತ ಕೇಳಬಹುದು. ಆಗ ನಾನು ಬಿಜೆಪಿ ಶಾಸಕ ಅಂತ ಹೇಳಕ್ಕಾಗಲ್ಲ, ಜವಾಬ್ದಾರಿಯುತ ಶಾಸಕನಾಗಿ ನಾನು ಸರ್ಕಾರದ ಯೋಜನೆ ಜನರಿಗೆ ತಲುಪಿಸಲೇಬೇಕು ಯಾರೇನೇ ಕಾಮೆಂಟ್ಸ್ ಮಾಡಿದರೂ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಶಾಸಕನಾಗಿ ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಅವರ್ಯಾರೋ ಅಂತಾರೆ ಇವರ್ಯಾರೋ ಅಂತಾರೆ ಅಂತ ನಾನು ನೋಡಲ್ಲ. ಕ್ಷೇತ್ರದ ಜನರ ಸೇವೆ ನನಗೆ ಮುಖ್ಯ ಎಂದರು.
ಕೆಲವರಿಂದ ಮಾಧ್ಯಮಕ್ಕೆ ತಪ್ಪು ಮಾಹಿತಿ:ಕೆಲವರು ಯಾರೋ ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಸೋಮಶೇಖರ್ ಬೆಂಬಲಿಗರ ಸಭೆ ಕರೆದಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ ಸೋಮಶೇಖರ್ ಬೆಂಬಲಿಗರ ಸಭೆ ಮಾಡುತ್ತಿಲ್ಲ. ಇಲ್ಲಿನ ಸಭೆಯಲ್ಲಿ ಬೇರೇನೂ ಸಹ ಮಾತನಾಡಲ್ಲ ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ಸಭೆ ಅಷ್ಟೇ ಮಾಡುತ್ತಿದ್ದೇನೆ.
ನಮ್ಮ ಯಶವಂತಪುರ ಕ್ಷೇತ್ರದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು ಎಷ್ಟು ಜನ ಇದ್ದಾರೆ. ನಮ್ಮ ಕ್ಷೇತ್ರದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಎಷ್ಟು ಫಲಾನುಭವಿಗಳು ಇದ್ದಾರೆ ಎಂಬ ಮಾಹಿತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ 17 ಪಂಚಾಯತ್ ವ್ಯಾಪ್ತಿಯ ಮುಖಂಡರ ಸಭೆ ಕರೆದಿದ್ದೇನೆ. ಯಾರಾದರೂ ಬಿಟ್ಟು ಹೋದರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಮಧ್ಯಾಹ್ನ 3 ಗಂಟೆಗೆ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮುಖಂಡರ ಸಭೆ ನಡೆಸುತ್ತೇನೆ.
ಸರ್ಕಾರ ಏನು ಮಾಡಿದರು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಬೇಕು ಸರ್ಕಾರದ ಯೋಜನೆ ತಲುಪಿಸುವ ಸಲುವಾಗಿ ಅಧಿಕಾರಿಗಳು ಸಹ ಕೆಲಸ ಮಾಡುತ್ತಿದ್ದಾರೆ ನಾವೆಲ್ಲರೂ ಶ್ರಮ ಹಾಕಿದರೆ ಜನರಿಗೆ ನೂರಕ್ಕೆ ನೂರರಷ್ಟು ಗೃಹ ಲಕ್ಷ್ಮಿ ಯೋಜನೆ ತಲುಪುತ್ತದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಅದನ್ನು ನೀವು ಮುಖ್ಯಮಂತ್ರಿಗಳನ್ನೇ ಕೇಳಬೇಕು, ನಾನು ರಾಜಕೀಯ ಮಾತನಾಡುವುದಾದರೆ ಯಾರಿಗೂ ಭಯಪಡುವ ಅಗತ್ಯ ಇಲ್ಲ, ನಾನು ಕಾಂಗ್ರೆಸ್ ಹೋಗುವ ಬಗ್ಗೆ ಯಾರ ಹತ್ತಿರವೂ ಮಾತಾಡಿಲ್ಲ. ಈ ಬಗ್ಗೆ ಮಾಧ್ಯಮದಲ್ಲಿ ಹಾಕುತ್ತಿದ್ದೀರಿ, ಅವರು ಮಾತಾಡುತ್ತಿದ್ದಾರೆ ಅಷ್ಟೇ ಎಂದರು.
ಪ್ರಭಾವಿ ಸಚಿವರಾಗಿದ್ದವರು ಈಗ ಅಭಿವೃದ್ಧಿ ಮಾಡಿಕೊಡಿ ಅಂತಾ ಸಿಎಂ ಬಳಿ ಹೋಗಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಎಸ್.ಟಿ ಸೋಮಶೇಖರ್, ಕುಮಾರಸ್ವಾಮಿ ಅವರಿಗೆ ನಾನು ಜವಾಬು ಕೊಡಲು ಹೋಗಲ್ಲ, ಅವರು ದೇಶದ ಪ್ರಧಾನಿ ಆಗಿದ್ದವರ ಮಗ ಹಾಗೂ ಮಾಜಿ ಮುಖ್ಯಮಂತ್ರಿ. ಆದರೆ ನಾನು ಒಬ್ಬ ಆರ್ಡಿನರಿ ವೆಟರ್ನರಿ ಇನ್ಸ್ಪೆಕ್ಟರ್ ಮಗ ಎಂದರು.
ಇದನ್ನೂ ಓದಿ:ಕುಮಾರ ಬಂಗಾರಪ್ಪ ಕಾಂಗ್ರೆಸ್ಗೆ ಹೋಗಲ್ಲ: ಸಂಸದ ಬಿ.ವೈ ರಾಘವೇಂದ್ರ ವಿಶ್ವಾಸ