ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಆದ್ಯತೆಯ ಮೇರೆಗೆ ಯಾವ ರೀತಿ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ನಿರ್ಧರಿಸುತ್ತಾರೆಯೇ ಹೊರತು ಜಾತಿ ಆಧಾರದ ಮೇಲಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪನವರ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಧ್ಯಮದರೊಂದಿಗೆ ಅವರು ಮಾತನಾಡಿದರು.
ಬರೀ ಲಿಂಗಾಯತ ಅಧಿಕಾರಿಗಳು ಮಾತ್ರ ಇರ್ತಾರಾ?. ಎಲ್ಲಾ ಜಾತಿಯವರು ಇರುತ್ತಾರೆ. ಅವರಿಗೂ ಆದ್ಯತೆ ಕೊಡಬೇಕಾಗುತ್ತದೆ. ಶಾಮನೂರು ಶಿವಶಂಕಪ್ಪನವರು ಎಲ್ಲಾ ಜಾತಿಯವರ ಬಗ್ಗೆ ಮಾತನಾಡಬೇಕಾಗಿತ್ತು. ಅವರ ಹಿರಿತನಕ್ಕೆ ಗೌರವ ಇರಬೇಕು, ಈ ರೀತಿಯ ಹೇಳಿಕೆ ಕೊಡುವುದು ತಪ್ಪಾಗುತ್ತದೆ. ಶಾಮನೂರು ಶಿವಶಂಕರಪ್ಪ ಅವರಿಗೆ ಯಡಿಯೂರಪ್ಪನವರ ಸಾಥ್ ಅಂತೆ, ಅವರಿಗೆ ಮಾನ,ಮರ್ಯಾದೆ ಇದ್ಯಾ?. ಅವರು ಅಧಿಕಾರದಲ್ಲಿದ್ದಾಗ ವಾಹನ ಚಾಲಕನಿಂದ ಹಿಡಿದು ಅಡುಗೆ ಭಟ್ಟನವರೆಗೂ ಲಿಂಗಾಯತರನ್ನೇ ಇಟ್ಕೊಂಡಿದ್ದರು ಎಂದು ಕಿಡಿಕಾರಿದರು.
ಮುಖ್ಯಮಂತ್ರಿಗಳು ಕುರುಬ ಸಮುದಾಯದ ಒಂದಿಷ್ಟು ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿರುತ್ತಾರೆ, ಅದನ್ನು ಇಲ್ಲ ಅನ್ನಲಾಗುತ್ತಾ?. ಶಾಮನೂರು ಶಿವಶಂಕರಪ್ಪನವರ ಮಗನೂ ಮಂತ್ರಿಯಾಗಿದ್ದಾರೆ. ಅವರೆಲ್ಲ ಸೇರಿ ಮಾತನಾಡಬೇಕು. ಶಾಮನೂರು ಶಿವಶಂಕರಪ್ಪನವರು ಬರೀ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದ್ದಾರೆ ಎಂದರೆ ಹೇಗೆ?, ಬೇರೆಯವರನ್ನು ಬಿಟ್ಟುಹೋಗಿದ್ದಾರಾ?, ಎಲ್ಲಾ ಜಾತಿಯವರನ್ನೂ ತೆಗೆದುಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಏನು ಮಾಡಬೇಕು ಎಂದು ಗೊತ್ತಿದೆ, ಉಪ ಮುಖ್ಯಮಂತ್ರಿಗಳೂ ಇದ್ದಾರೆ, ಅವರು ನಿರ್ಧಾರ ಮಾಡುತ್ತಾರೆ ಎಂದರು.