ಬೆಂಗಳೂರು: ಬೃಹತ್ ಕೋವಿಡ್ ಲಸಿಕಾ ಅಭಿಯಾನದ ಮೂಲಕ ಒಂದೇ ದಿನ 29 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಮುಂದಿನ ತಿಂಗಳ ಅಂತ್ಯದೊಳಗೆ ರಾಜ್ಯದಲ್ಲಿ ಎಲ್ಲರಿಗೂ ಮೊದಲ ಡೋಸ್ ನೀಡಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು.
ದಾವಣಗೆರೆ ಪ್ರವಾಸಕ್ಕೆ ತೆರಳುವ ಮುನ್ನ ಪ್ರತಿಕ್ರಿಯಿಸಿದ ಅವರು, ನವೆಂಬರ್ ಅಥವಾ ಡಿಸೆಂಬರ್ 15 ರೊಳಗೆ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ಗುಡುಗು:ಪ್ರತಿ ತಿಂಗಳು ಲಸಿಕೆ ಜಾಸ್ತಿ ಆಗುತ್ತಾ ಹೋಗಿದೆ. ಆಗಸ್ಟ್ನಲ್ಲಿ ಒಂದು ಕೋಟಿ 20 ಲಕ್ಷ ಲಸಿಕೆ ಬಂದಿತ್ತು. ಆಗ ಮೋದಿ ಹುಟ್ಟುಹಬ್ಬ ಇತ್ತಾ? ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು. ಕಾಂಗ್ರೆಸ್ನವರ ಧೋರಣೆ ಗಮನಿಸಿ ನೋಡಬೇಕು. ಮೊದಲೆಲ್ಲ ಲಸಿಕೆ ಇನ್ನೂ ಎರಡು ವರ್ಷ ಕಳೆದರೂ ಬರೋಲ್ಲ ಅಂತಿದ್ದರು. ಲಸಿಕೆ ಬಂದಮೇಲೆ ಇದು ಗುಣಮಟ್ಟದ್ದಲ್ಲ ಮೋದಿ, ಬಿಜೆಪಿ ಲಸಿಕೆ ಅಂತ ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ ಯಾವಾಗ ಜನ ಕ್ಯೂ ನಲ್ಲಿ ನಿಂತು ಲಸಿಕೆ ತೆಗೆದುಕೊಳ್ಳೋಕ್ಕೆ ಶುರು ಮಾಡಿದರೋ ಆಗ ಲಸಿಕೆ ಕಡಿಮೆ ಬರುತ್ತಿದೆ ಎಂದು ಗೇಲಿ ಮಾಡಿದರು. ಈಗ ಹೆಚ್ಚು ಬರೋಕ್ಕೆ ಆರಂಭವಾದಾಗ ಹೊಸದೊಂದು ಧೋರಣೆ ಶುರು ಮಾಡಿದ್ದಾರೆ. ಅವರಿಗೆ ಬದ್ಧತೆ ಇಲ್ಲ. ಜನರ ಆರೋಗ್ಯದ ವಿಚಾರದಲ್ಲೂ ರಾಜಕಾರಣ ಮಾಡುತ್ತಾರೆ. ಇಂತಹ ನೀಚರು ಎಲ್ಲೂ ಇಲ್ಲ ಎಂದು ಕಿಡಿಕಾರಿದರು.
ಮಕ್ಕಳಿಗೆ ಲಸಿಕೆ:ಮಕ್ಕಳಿಗೆ ಲಸಿಕೆ ಇನ್ನೂ ಬಂದಿಲ್ಲ. ಆದರೆ 12 ರಿಂದ 17 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ತರಲಾಗುವುದು. ಈಗಾಗಲೇ ಹಲವು ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು, ಹೊಸ ಸಂಶೋಧನೆ ಮಾಡಲಾಗುತ್ತಿದೆ. ಭಾರತ್ ಬಯೋಟೆಕ್ನವರು ಪ್ರಯತ್ನ ಮಾಡುತ್ತಿದ್ದು, ಆಶಾ ಭಾವನೆ ಇರಬೇಕು ಅಂತ ಸಚಿವ ಸುಧಾಕರ್ ತಿಳಿಸಿದರು.